ಡಾ. ರಾಜ್ಕುಮಾರ್ ಮೊಮ್ಮಗಳು, ನಟ ರಾಮ್ಕುಮಾರ್ ಮಗಳಾದ ಧನ್ಯಾ ರಾಮ್ಕುಮಾರ್ ಹಾಗೂ ಸೂರಜ್ ಗೌಡ ನಟಿಸಿ, ನಿರ್ದೇಶನ ಮಾಡಿರೋ ಸಿನಿಮಾ 'ನಿನ್ನ ಸನಿಹಕೆ'.. ಟ್ರೈಲರ್ ಹಾಗೂ ಹಾಡುಗಳಿಂದಲೇ ಸಿಕ್ಕಾಪಟ್ಟೇ ಸದ್ದು ಮಾಡ್ತಿದ್ದ ಈ ಚಿತ್ರ ಇಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ನಿನ್ನೆ, 'ನಿನ್ನ ಸನಿಹಕೆ' ಚಿತ್ರತಂಡವು ಕನ್ನಡ ಚಿತ್ರರಂಗದ ಸ್ನೇಹಿತರಿಗೆ ಬೆಂಗಳೂರಿನ ಮಾಲ್ವೊಂದರಲ್ಲಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು.
ಈ ಶೋಗೆ ಅಣ್ಣಾವ್ರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಯುವ ನಟ ವಿಕ್ರಮ್, ಶ್ರೀನಗರ ಕಿಟ್ಟಿ ಸೇರಿದಂತೆ 'ನಿನ್ನ ಸನಿಹಕೆ' ಚಿತ್ರತಂಡದ ಕಲಾವಿದರು ಹಾಗೂ ಚಿತ್ರರಂಗದ ಸ್ನೇಹಿತರು ನಿನ್ನ ಸನಿಹಕೆ ಸಿನಿಮಾ ನೋಡಿ ಮೆಚ್ಚಿಕೊಂಡರು.
ಶಿವಣ್ಣ, ಅಪ್ಪು ಮತ್ತು ರಾಘಣ್ಣ ಅವರು ಧನ್ಯಾ ರಾಮ್ಕುಮಾರ್ ಅವರ ಅಭಿನಯ ನೋಡಿ ಕೊಂಡಾಡಿದರು. ತಮ್ಮ ತಂಗಿ ಪೂರ್ಣಿಮಾ ಹಾಗೂ ನಟ ರಾಮ್ಕುಮಾರ್ ಮಗಳಾಗಿರೋ ಧನ್ಯಾಳ ನಟನೆ ನೋಡಿ ಕೊಂಚ ಭಾವುಕರಾದ ಶಿವರಾಜ್ ಕುಮಾರ್, ಇಡೀ ಚಿತ್ರತಂಡವನ್ನ ಅಭಿನಂದಿಸಿದರು. "ಕಲೆ ಅನ್ನೋದು ರಕ್ತಗತವಾಗಿ ಬಂದಿದೆ ಅನ್ನೋದಕ್ಕೆ ಧನ್ಯಾ ಅಷ್ಟು ಚೆನ್ನಾಗಿ ಅಭಿನಯಿಸಿರೋದೇ ಸಾಕ್ಷಿ. ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರು ತುಂಬಾ ಚೆನ್ನಾಗಿ ನಟಿಸಿದ್ದಾರೆ" ಎಂದರು.