ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇದುವರೆಗೂ ಅದೆಷ್ಟು ಹೊಸ ಚಿತ್ರಗಳನ್ನು ಘೋಷಿಸಿದ್ದಾರೋ ಲೆಕ್ಕ ಇಟ್ಟವರಿಲ್ಲ. ಬಹುಶಃ ಘೋಷಿಸಿದ ಚಿತ್ರಗಳೆಲ್ಲ ತೆರೆಗೆ ಬಂದಿದ್ದರೆ, ಇಷ್ಟೊತ್ತಿಗೆ ಅವರ ಅಭಿನಯದ ಮತ್ತು ನಿರ್ದೇಶನದ ಚಿತ್ರಗಳ ಸಂಖ್ಯೆ ಇನ್ನೂ ಹೆಚ್ಚಿರುತ್ತಿತ್ತು. ಆದರೆ, ರವಿಚಂದ್ರನ್ ಘೋಷಿಸಿದ ಚಿತ್ರಗಳೆಲ್ಲ, ಕಾರಣಾಂತರಗಳಿಂದ ಕಾರ್ಯರೂಪಕ್ಕೆ ಬಂದಿಲ್ಲ.
ಈಗ್ಯಾಕೆ ಈ ವಿಷಯ ಎಂದರೆ, ರವಿಚಂದ್ರನ್ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ಇನ್ನೂ ಮೂರು ಹೊಸ ಚಿತ್ರಗಳನ್ನು ಘೋಷಿಸಿದ್ದಾರೆ. ಗಾಡ್, 60 ಮತ್ತು ಬ್ಯಾಡ್ ಬಾಯ್ಸ್ ಹೊಸದಾಗಿ ಘೋಷಿಸಿರುವ ಚಿತ್ರಗಳು. ಮುಂದಿನ ದಿನಗಳಲ್ಲಿ ಈ ಚಿತ್ರಗಳನ್ನು ಕೈಗೆತ್ತಿಕೊಳ್ಳುವುದಾಗಿ ರವಿಚಂದ್ರನ್ ಹೇಳಿದ್ದಾರೆ. ಸದ್ಯ, ಲಾಕ್ಡೌನ್ ಇರುವುದರಿಂದ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ದೃಶ್ಯಂ 2 ಮತ್ತು ಎಸ್. ಮಹೇಂದರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲಿರುವ ರವಿಚಂದ್ರನ್, ಆ ಚಿತ್ರಗಳ ನಂತರ ಹೊಸದಾಗಿ ಘೋಷಿಸಿರುವ ಚಿತ್ರಗಳನ್ನು ಒಂದರ ಹಿಂದೊಂದು ತೆಗೆದುಕೊಳ್ಳುವ ಸಾಧ್ಯತೆ ಇದೆ.