ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಅಲಿಯಾಸ್ ಲಕ್ಷ್ಮಿಯಾಗಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ರಶ್ಮಿ ಪ್ರಭಾಕರ್ ಇದೀಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ವೀಕ್ಷಕರ ನೆಚ್ಚಿನ ನಟಿ ರಶ್ಮಿ ಪ್ರಭಾಕರ್ ಮತ್ತೆ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಇವಳು ಸುಜಾತಾ' ಧಾರಾವಾಹಿ ಇಂದಿನಿಂದ ಮರು ಪ್ರಸಾರ ಆರಂಭಿಸಿದೆ. ಇನ್ನು ಮುಂದೆ ಪ್ರತಿ ವಾರಾಂತ್ಯವೂ ಇದು ಪ್ರಸಾರ ಆಗಲಿದೆ. ಇವಳು ಸುಜಾತಾ ಧಾರಾವಾಹಿಯಲ್ಲಿ ನಾಯಕ ಪಾರ್ಥನ ಗೆಳತಿ ರಶ್ಮಿಯಾಗಿ ರಶ್ಮಿ ಪ್ರಭಾಕರ್ ಅಭಿನಯಿಸುತ್ತಿದ್ದಾರೆ.
ಅಂದ ಹಾಗೇ ಧಾರಾವಾಹಿಯೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ವಿಚಾರವನ್ನು ಸ್ವತಃ ರಶ್ಮಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಯಾವ ಧಾರಾವಾಹಿ ಎಂದು ಹೇಳಿರದ ಆಕೆ ಯೋಚಿಸುವ ಅವಕಾಶವನ್ನು ಜನರಿಗೆ ಬಿಟ್ಟಿದ್ದರು. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ರಶ್ಮಿ ಅವರ ನಟನೆಗೆ ಫಿದಾ ಆಗಿದ್ದ ವೀಕ್ಷಕರು ಧಾರಾವಾಹಿ ಮುಗಿದ ಸಮಯದಲ್ಲಿ ತಮ್ಮ ನೆಚ್ಚಿನ ನಟಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು.
ಜೀವನಚೈತ್ರ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿರುವ ರಶ್ಮಿ ಪ್ರಭಾಕರ್ ಮುಂದೆ ಮಹಾಭಾರತ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇದರ ಜೊತೆಗೆ ಶುಭವಿವಾಹ ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸಿರುವ ಇವರಿಗೆ ಕಿರುತೆರೆಯಲ್ಲಿ ಹೆಸರು ತಂದಿದ್ದು ಲಚ್ಚಿ ಪಾತ್ರ.
ತೆಲುಗಿನ ಪೌರ್ಣಮಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಛಾಪನ್ನು ಪಸರಿಸಿದ ರಶ್ಮಿ ಬಿಬಿ5, ಮಹಾಕಾವ್ಯ ಸಿನಿಮಾಗಳಲ್ಲಿ ಕೂಡಾ ಅಭಿನಯಿಸಿದ್ದಾರೆ.