ಕನ್ನಡತಿ ಖ್ಯಾತಿಯ ರಂಜನಿ ರಾಘವನ್, ನಟನೆಯ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ, ಬರವಣಿಗೆಯಲ್ಲೂ ತೊಡಗಿಸಿಕೊಂಡವರು. ಲಾಕ್ಡೌನ್ ಸಂದರ್ಭದಲ್ಲಿ ಅವಧಿ ಮ್ಯಾಗ್ನಲ್ಲಿ ಅವರು ಪ್ರತಿವಾರ ಕಥೆಗಳನ್ನು ಬರೆಯುತ್ತಿದ್ದರು. ಆ ಕಥೆಗಳನ್ನೆಲ್ಲ ಸೇರಿಸಿ, ಅವರೊಂದು ಕಥಾ ಸಂಕಲನ ಮಾಡಿದ್ದಾರೆ. 'ಕತೆ ಡಬ್ಬಿ' ಹೆಸರಿನ ಈ ಸಂಕಲನವು ಇಂದು ಸಂಜಯನಗರದ ಬಹುರೂಪಿ ಬುಕ್ ಹಬ್ನಲ್ಲಿ ಬಿಡುಗಡೆಯಾಗುತ್ತಿದೆ.
ನಟಿಯಾಗಿದ್ದ ರಂಜನಿಗೆ ಬರವಣಿಗೆಯಲ್ಲಿ ಆಸಕ್ತಿ ಬಂದಿದ್ದು ಹೇಗೆ ಎಂದರೆ, ಅದಕ್ಕೆ ಕಾರಣ ಧಾರಾವಾಹಿಗಳು ಎನ್ನುತ್ತಾರೆ ಅವರು. ಬಾಲ್ಯದಿಂದಲೂ ರಂಜನಿಗೆ ಬರವಣಿಗೆಯಲ್ಲಿ ಆಸಕ್ತಿ ಇತ್ತಂತೆ. ಆದರೆ, ತಾನೂ ಬರೆಯಬೇಕು ಎಂದು ಅವರಿಗೆ ಅನಿಸಿದ್ದು ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ ಮೇಲೆ. ಧಾರಾವಾಹಿಗಳಲ್ಲಿ ನಟಿಸುವಾಗ ಒಂದು ಕಥೆಯನ್ನು ಹೇಗೆ ಹೆಣೆಯುತ್ತಾರೆ, ಚಿತ್ರಕಥೆ ಹೇಗೆ ಬರೆಯುತ್ತಾರೆ ಎಂಬ ಕುತೂಹಲದಿಂದ ಗಮನಿಸುತ್ತಾ ಹೋದರಂತೆ. ಕ್ರಮೇಣ ಅವರೂ ಬರೆಯುವುದಕ್ಕೆ ಶುರು ಮಾಡಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಇಷ್ಟದೇವತೆ ಎಂಬ ಧಾರಾವಾಹಿಗೆ ಚಿತ್ರಕಥೆಯನ್ನೂ ಬರೆದಿದ್ದಾರೆ.