ಚಿತ್ರ ಪ್ರದರ್ಶನ ಪ್ರಾರಂಭವಾದ ನಂತರ ಬಿಡುಗಡೆಯಾಗಲಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಖ್ಯಾತಿಯ ಚೇತನ್ ಅಭಿನಯದ 'ರಣಂ' ಚಿತ್ರವು ಇದೀಗ ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದು ನಿಜವೇ ಆದಲ್ಲಿ ಲಾಕ್‍ಡೌನ್ ತೆರವಾದ ನಂತರ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಬಿಗ್ ಬಜೆಟ್‍ನ ಚಿತ್ರ ಎಂಬ ಹೆಗ್ಗಳಿಕೆಗೆ ರಣಂ ಪಾತ್ರವಾಗಲಿದೆ. ಲಾಕ್‍ಡೌನ್‍ನಿಂದ ಏಳು ತಿಂಗಳ ಕಾಲ ಬಂದ್ ಆಗಿದ್ದ ಚಿತ್ರಮಂದಿರಗಳಿಗೆ ಅಕ್ಟೋಬರ್ 15ರಿಂದ ಪ್ರದರ್ಶನ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಅನುಮತಿ ಸಿಗುತ್ತಿದ್ದಂತೆಯೇ, ತಮ್ಮ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದವರು ಕನಕಪುರ ಶ್ರೀನಿವಾಸ್.
ಆದರೆ, ಅ.15 ರಂದು ಚಿತ್ರಪ್ರದರ್ಶನ ಶುರುವಾದರೂ ರಣಂ ಬಗ್ಗೆ ಸುದ್ದಿಯೇ ಇರಲಿಲ್ಲ. ಈ ಬಗ್ಗೆ ಎಲ್ಲರೂ ಮರೆತು ಕೂತಿರುವಾಗ, ಚಿತ್ರವನ್ನು ಡಿಸೆಂಬರ್ನಲ್ಲಿ ಬಿಡುಗಡೆ ಮಾಡುವುದಕ್ಕೆ ಶ್ರೀನಿವಾಸ್ ಮುಂದಾಗಿದ್ದಾರೆ. ಇಷ್ಟಕ್ಕೂ ಅಕ್ಟೋಬರ್ನಲ್ಲಿ ಬಿಡುಗಡೆಗೆ ಮುಹೂರ್ತ ಇಟ್ಟವರು ಮತ್ಯಾಕೆ ಹಿಂದೆ ಸರಿದರು ಅನ್ನುವ ಬಗ್ಗೆ ಕುತೂಹಲ ಸಹಜ. ಅದಕ್ಕೆ ಕಾರಣ ಹೀಗಿದೆ ನೋಡಿ.
ಚಿತ್ರಮಂದಿರದವರು ಏಳು ತಿಂಗಳು ಕಾಲ ಬಾಗಿಲು ಹಾಕಿದ್ದರಿಂದ, ಚಿತ್ರಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಹೊಸ ಚಿತ್ರಗಳಿಗೆ ದುಂಬಾಲು ಬೀಳುತ್ತಾರೆ ಎಂದು ಕನಕಪುರ ಶ್ರೀನಿವಾಸ್ ಅಂದುಕೊಂಡಿದ್ದರಂತೆ. ಒಂದೊಂದು ಚಿತ್ರಮಂದಿರದಿಂದ ಇಷ್ಟಿಷ್ಟು ಅಂತ ಅಡ್ವಾನ್ಸ್ ಪಡೆದು ಸಖತ್ ದುಡ್ಡು ಮಾಡಬಹುದು ಎಂಬ ಅಂದಾಜಿನಲ್ಲಿದ್ದ ಕನಕಪುರ ಶ್ರೀನಿವಾಸ್‍ಗೆ ಆರಂಭದಲ್ಲೇ ನಿರಾಶೆಯಾಗಿದೆ. ಕಾರಣ. ಜನ ಬರುತ್ತಾರೋ ಇಲ್ಲವೋ ಎಂಬ ಭಯದಿಂದ ಯಾವೊಬ್ಬ ಚಿತ್ರಮಂದಿರದವರೂ ಹೊಸ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಮುಂದಾಗಲಿಲ್ಲ. ಇನ್ನು ಅಡ್ವಾನ್ಸ್ ಕೊಡುವುದೆಲ್ಲಾ ದೂರದ ಮಾತು.
ಹೀಗೆ ಯಾವಾಗ ತಾನು ಚಿತ್ರ ಬಿಡುಗಡೆ ಮಾಡುತ್ತೀನಿ ಎಂದು ಹೇಳಿದರೂ ಕೂಡಾ ಯಾವುದೇ ಚಿತ್ರಮಂದಿರದವರಿಂದಲೂ ಒಳ್ಳೆಯ ಪ್ರತಿಕ್ರಿಯೆ ಬರಲಿಲ್ಲ. ಆಗ ಕನಕಪುರ ಶ್ರೀನಿವಾಸ್ ಸುಮ್ಮನಾಗಬಿಟ್ಟಿರು. ಈಗ ಚಿತ್ರ ಬಿಡುಗಡೆ ಮಾಡಿದರೆ ಇನ್ನಷ್ಟು ಹಣ ಕಳೆದುಕೊಳ್ಳಬೇಕಾದೀತು ಎಂದು ಬಿಡುಗಡೆಯನ್ನು ಮುಂದಕ್ಕೆ ಹಾಕಿದರು.
ಇದೀಗ ಒಂದೊಂದೇ ಹೊಸ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅಕ್ಟೋಬರ್ 20ಕ್ಕೆ 'ಆ್ಯಕ್ಟ್ 1978' ಬಿಡುಗಡೆಯಾಗಲಿದೆ. ಆ ಬಳಿಕ 'ಗಡಿಯಾರ' ಮತ್ತು 'ಅರಿಷಡ್ವರ್ಗ' ಎಂಬ ಚಿತ್ರಗಳು ಬಿಡುಗಡೆಯಾಗಲಿವೆ. ಇವನ್ನೆಲ್ಲಾ ನೋಡಿಕೊಂಡು, ಸ್ವಲ್ಪ ಧೈರ್ಯ ತಂದುಕೊಂಡಿರುವ ಕನಕಪುರ ಶ್ರೀನಿವಾಸ್ ಇದೀಗ ಡಿಸೆಂಬರ್ನಲ್ಲಿ ತಮ್ಮ 'ರಣಂ' ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಡೇಟ್ನಲ್ಲಾದ್ರೂ ಚಿತ್ರ ಬಿಡುಗಡೆಯಾಗುತ್ತಾ ನೋಡಬೇಕು.