ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕನ್ನಡದ ನಟ, ನಿರ್ದೇಶಕ ರಮೇಶ್ ಅರವಿಂದ್ ಜೊತೆಯಾಗಿ ಕುಳಿತು ಮಾತನಾಡಿದರೆ ಅಲ್ಲಿ ಹೆಚ್ಚು ಚರ್ಚೆಯಾಗುವ ವಿಷಯ ಸಿನಿಮಾ.
ಇತ್ತೀಚೆಗೆ ರಮೇಶ್ ಅರವಿಂದ್ ಜೊತೆ ರಜನಿಕಾಂತ್ ಮಾತನಾಡುತ್ತಾ, “ನೋಡಿ ರಮೇಶ್ ಒಂದು ಸಿನಿಮಾ ಹೇಗಿರಬೇಕು ಅಂದರೆ 20 ಸನ್ನಿವೇಶಗಳಲ್ಲಿ ಕ್ಲಾಪ್ ಬೀಳಬೇಕು, 20 ಸನ್ನಿವೇಶಗಳಲ್ಲಿ ಪ್ರೇಕ್ಷಕರು ನಗಬೇಕು ಮತ್ತು 20 ಸನ್ನಿವೇಶಗಳಲ್ಲಿ ಪ್ರೇಕ್ಷಕರು ಅಳಬೇಕು. ಇಂತಹ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗುತ್ತವೆ" ಎಂದಿದ್ದಾರೆ.
ಈ ಮಾತನ್ನು ಕೇಳಿಸಿಕೊಂಡ ರಮೇಶ್ ಅರವಿಂದ್ ಆಮೇಲೆ ತಮ್ಮ ಜೀವನದಲ್ಲಿ ಒಂದು ಲೆಕ್ಕಾಚಾರ ಅಳವಡಿಸಿಕೊಂಡರು. ಅದೇ ಸಿನಿಮಾದಿಂದ ಸಿನಿಮಾಕ್ಕೆ ಶೇ. 20 ಪರ್ಸೆಂಟ್ ಬದಲಾವಣೆ ತರಬೇಕು ಎಂದು ನಿರ್ಧರಿಸಿದ್ದಾರೆ. ರಮೇಶ್ ಅರವಿಂದ್ ತಮ್ಮ ವೃತ್ತಿ ಜೀವನದಲ್ಲಿ ಲವರ್ ಬಾಯ್ ಆಗಿ, ತ್ಯಾಗಮಾಯಿ ಪಾತ್ರಗಳಲ್ಲಿ, ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಬಿಡುಗಡೆಗೆ ಸಿದ್ಧವಾಗಿರುವ ‘100’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿಯೂ ಮಿಂಚಿದ್ದಾರೆ.
ಇದೀಗ ರಮೇಶ್ ಅರವಿಂದ್ ಭೈರಾದೇವಿ, ಶಿವಾಜಿ ಸೂರತ್ಕಲ್, ಬಟ್ಟರ್ ಫ್ಲೈ, ಪ್ಯಾರಿಸ್ ಪ್ಯಾರಿಸ್ ಸಿನಿಮಾಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ. ಇದರ ಜೊತೆಗೆ 2020ರ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮ ಕೂಡಾ ಶುರುವಾಗಲಿದೆ.