ಕಿರಿಕ್ ಮಾಡುತ್ತಲೇ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ಮಂಜಿನ ನಗರಿಯ ಕುವರಿ ರಶ್ಮಿಕಾ ಮಂದಣ್ಣನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 25ನೇ ವರ್ಷಕ್ಕೆ ಕಾಲಿಟ್ಟಿರೋ ನ್ಯಾಷನಲ್ ಕ್ರಶ್ ರಶ್ಮಿಕಾಗೆ ನಟ ರಕ್ಷಿತ್ ಶೆಟ್ಟಿ ಶುಭಾಶಯ ಹೇಳುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.
ಹೌದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿರಿಕ್ ಪಾರ್ಟಿ ಚಿತ್ರದ, ಸ್ಪೆಷಲ್ ವಿಡಿಯೋವನ್ನ ಹಂಚಿಕೊಳ್ಳುವ ಮೂಲಕ, 'ಕಿರಿಕ್ ಪಾರ್ಟಿ ಬಳಿಕ ಬಹುದೂರ ಹೋಗಿ, ಕನಸನ್ನು ನಿಜವಾದ ಯೋಧನಂತೆ ಬೆನ್ನಟ್ಟುತ್ತಿರುವೆ. ಪ್ರೌಡ್ ಆಫ್ ಯು ಗರ್ಲ್ ಹಾಗು ಜನ್ಮದಿನದ ಶುಭಾಶಯಗಳು. ಮತ್ತಷ್ಟು ಯಶಸ್ಸು ಸಿಗಲಿ' ಅಂತಾ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಜೋಸೆಫ್ ಪಾತ್ರಕ್ಕೆ ನಡೆದ ಆಡಿಷನ್‌ನ ವಿಡಿಯೊವೊಂದನ್ನು ರಕ್ಷಿತ್ ಅಪ್‌ಲೋಡ್ ಮಾಡಿದ್ದು, ವಿಡಿಯೋದಲ್ಲಿ ಕಾಲೇಜಿನಲ್ಲಿ ನಡೆಯುವ ಸನ್ನಿವೇಶ ಇದಾಗಿದ್ದು, ರಕ್ಷಿತ್ ಶೆಟ್ಟಿ ಅವರೇ ರಶ್ಮಿಕಾ ಮುಂದೆ ಕುಳಿತುಕೊಂಡು ದೃಶ್ಯವೊಂದರ ಸಂಭಾಷಣೆ ನಡೆಸುತ್ತಿರುವುದು ಇದರಲ್ಲಿದೆ.
ಅದು ರಶ್ಮಿಕಾ ಅವರಿಗೆ ಮೊದಲ ಚಿತ್ರವಾಗಿದ್ದ ಕಾರಣ, ಸಂಭಾಷಣೆ ವೇಳೆ ತಪ್ಪು ಮಾಡಿದಾಗ, ಸ್ವತಃ ರಕ್ಷಿತ್ ಶೆಟ್ಟಿ ಅವರೇ ರಶ್ಮಿಕಾ ಅವರಿಗೆ ಮುಖಭಾವನೆ, ಸಂಭಾಷಣೆ ಹೇಳಿಕೊಡುವ ಸನ್ನಿವೇಶ ವಿಡಿಯೋದಲ್ಲಿದೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಸಿನಿಪಯಣವನ್ನ ಆರಂಭಿಸಿದ, ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗು ಹಿಂದಿಯಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ.
ಶೆಟ್ರು ಮತ್ತು ಮಂದಣ್ಣ ಸಂಬಂಧದ ನಡುವೆ ಬಿರುಕು ಬಿಟ್ಟಿದೆ ಎಂದು ಸ್ಯಾಂಡಲ್ವುಡ್ನಲ್ಲಿ ಸುದ್ದಿ ಹರಿದಾಡುತ್ತಿದ್ರೂ ಸಹ ರಕ್ಷಿತ್ ಅವರು ರಶ್ಮಿಕಾ ಮಂದಣ್ಣರ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಡಿಯೋ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರಿರುವುದು ಈ ಇಬ್ಬರ ಅಭಿಮಾನಿಗಳಿಗೆ ಖುಷಿ ತಂದಿದೆ.