ನಟ ಪುನೀತ್ ರಾಜ್‍ಕುಮಾರ್ 70-80ನೇ ವಯಸ್ಸಿನಲ್ಲಿ ಮಾಡಬೇಕಾದ ಸಾಧನೆ, ಸಾಮಾಜಿಕ ಕೆಲಸಗಳನ್ನ ಕೇವಲ 46ನೇ ವಯಸ್ಸಿನಲ್ಲಿ ಮುಗಿಸಿ ನಮ್ಮನ್ನು ಅಗಲಿದ್ದಾರೆ. ಸದಾ ರಾಜಕುಮಾರನಂತೆ ನಗುತ್ತಾ, ಸರಳತೆಯಿಂದಲೇ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‍ಕುಮಾರ್ ಹಾಗು ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಯ ಹತ್ತಿರ ಕೆಲಸಗಳನ್ನ ಮಾಡ್ತಾ ಇರೋ ಲಕ್ಷ್ಮಣ್ ಹಾಗು ಲಲಿತಮ್ಮ ನಟ ಪುನೀತ್ ಅವರ ಬಗ್ಗೆ ಹೇಳಿಕೊಂಡಿದ್ದಾರೆ.
16 ವರ್ಷದಿಂದ ಇಲ್ಲಿನ ಸಮಾಧಿಯ ಸುತ್ತಾ ಕಸ ಗುಡಿಸಿ, ದೀಪ ಹಚ್ಚುತ್ತಾ ಬಂದಿರುವ ಲಕ್ಷ್ಮಣ್, ತಮ್ಮನ್ನು ಇಲ್ಲಿಯವರೆಗೆ ಸಾಕಿದ್ದು ಅಪ್ಪು ಸಾರ್ ಎಂದಿದ್ದಾರೆ. ಅಲ್ಲದೇ, ಅಪ್ಪು ಸಾರ್ ದೊಡ್ಡ ಸ್ಟಾರ್ ಆಗಿದ್ದರೂ ಕೂಡ ನನ್ನನ್ನ ಅಪ್ಪಾಜಿ ಅಂತಾ ಕರೆಯುತ್ತಿದ್ದರು. ನನ್ನ ಕಂಡರೆ ಅವರಿಗೆ ತುಂಬಾ ಇಷ್ಟ. ಆರೋಗ್ಯ ಹುಷಾರ್ ಅಂತಾ ಹೇಳ್ತಾ ಇದ್ರು. ನನ್ನ ಮುಖ ನೋಡುತ್ತಾ ಇದ್ದಂತೆ, ಕಷ್ಟ ಏನು ಎಂಬುದನ್ನು ಅರಿತುಕೊಂಡು ಸಹಾಯ ಮಾಡ್ತಾ ಇದ್ರು. ಇದೀಗ ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು ಎಂದಿದ್ದಾರೆ.
ಪ್ರತಿದಿನ ಡಾ. ರಾಜ್‍ಕುಮಾರ್ ಹಾಗು ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಯ ಬಳಿ ಬರುತ್ತಿದ್ದ ಪುನೀತ್ ರಾಜ್ಕುಮಾರ್ಗೆ ಇಲ್ಲಿನ ಪಾರ್ಕ್ ಪರಿಸರ ತುಂಬಾನೇ ಇಷ್ಟವಂತೆ. ಮಳೆ ಇರಲಿ, ಚಳಿ ಇರಲಿ, ಇಲ್ಲಿಗೆ ಬರೋದನ್ನ ಪುನೀತ್ ನಿಲ್ಲಿಸಿರಲಿಲ್ವಂತೆ. ತಂದೆ ಹಾಗು ತಾಯಿ ಸಮಾಧಿ ಹತ್ತಿರ ತುಂಬಾ ಹೊತ್ತು ಕಳೆಯುತ್ತಿದ್ದ ಅಪ್ಪು ಇಲ್ಲಿ ಬೆಳೆಯುವ ಕಬ್ಬು ಹಾಗು ಪರಂಗಿ ಹಣ್ಣು ಅಂದ್ರೆ ತುಂಬಾ ಇಷ್ಟಪಡುತ್ತಿದ್ದರಂತೆ.