ವರನಟ ಪದ್ಮಭೂಷಣ ಡಾ.ರಾಜ್ಕುಮಾರ್ ಹೆಸರಲ್ಲಿ ರಾಘವೇಂದ್ರ ರಾಜ್ಕುಮಾರ್, ಕಿರಿಯ ಪುತ್ರ ಯುವ ರಾಜ್ಕುಮಾರ್ ಮತ್ತು ಪತ್ನಿ ಶ್ರೀದೇವಿ ಸೇರಿಕೊಂಡು, ಡಾ.ರಾಜ್ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ನಾಲ್ಕು ವರ್ಷಗಳ ತುಂಬುತ್ತಿದೆ. ಇದೀಗ ಮತ್ತೊಂದು ಶಿಕ್ಷಣ ಕ್ರಾಂತಿಗೆ ಮುಂದಾದ ಅಕಾಡೆಮಿ ರಾಜ್ಕುಮಾರ್ ಲರ್ನಿಂಗ್ ಆ್ಯಪ್ ಅನಾವರಣ ಮಾಡಿದೆ.
ರಾಜ್ಕುಮಾರ್ ಲರ್ನಿಂಗ್ ಆ್ಯಪ್ನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್‍ಕುಮಾರ್, ಯುವ ರಾಜ್ಕುಮಾರ್ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು.
ರಾಜ್ಕುಮಾರ್ ಲರ್ನಿಂಗ್ ಆ್ಯಪ್ ಬಿಡುಗಡೆ ಹೇಗಿರಲಿದೆ ಆ್ಯಪ್?:ಕೊರೊನಾ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೀಗಾಗಿ ರಾಜ್ಕುಮಾರ್ ಲರ್ನಿಂಗ್ ಆ್ಯಪ್ ಹೆಚ್ಚಿನ ಕಲಿಕಾ ಕ್ಷೇತ್ರಗಳಿಗೆ ವಿಸ್ತರಿಸುವ ಮೂಲಕ ಸಹಾಯಕವಾಗಲಿದೆ. ಇನ್ನು ರಾಜ್‌ಕುಮಾರ್ ಕಲಿಕಾ ಆ್ಯಪ್ ಸಂಶೋಧನೆ ಆಧಾರಿತ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಗುಣಮಟ್ಟದ ಕಲಿಕೆಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶ.
ಈ ಆ್ಯಪ್ನಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್, ದಿನನಿತ್ಯದ ಕಥೆಗಳು ಮತ್ತು ಸೌಂಡ್ ಎಫೆಕ್ಟ್‌ಗಳ ಸಂಯೋಜನೆಯನ್ನು ಬಳಸಿಕೊಂಡು ರೆಕಾರ್ಡ್ ಮಾಡಿದ ವಿಡಿಯೋ ವಿಷಯವನ್ನು ಸರಳವಾಗಿ ಪ್ರಸ್ತುತಪಡಿಸಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ರೆಕಾರ್ಡ್ ಮಾಡಿದ ವಿಡಿಯೋ ವಿಷಯವನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ರಾಜ್ಕುಮಾರ್ ಲರ್ನಿಂಗ್ ಆ್ಯಪ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ ಅಷ್ಟೇ ಅಲ್ಲದೆ, ಅವರು ಇಂಟರ್ನೆಟ್ ಇಲ್ಲದ ವಲಯದಲ್ಲಿದ್ದರೂ ಸಹ ಕಲಿಯಬಹುದು. ಇದಲ್ಲದೆ ಅವರು ಅನೇಕ ನಿಗದಿತ ಪಠ್ಯಕ್ರಮ ಅಥವಾ ದೈನಂದಿನ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಬಳಿಕ ವಿದ್ಯಾರ್ಥಿಗಳ ತಿಳುವಳಿಕೆ ಮತ್ತು ಶ್ರೇಣಿಯನ್ನು ಅಳೆಯಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಡಾ. ರಾಜ್ ಕುಮಾರ್ ಬರೀ ಸ್ಟಾರ್ ಅಲ್ಲ. ಆಕಾಶದಲ್ಲಿ ಇರುವ ನಕ್ಷತ್ರ. ಅವರಂತಹ ಸರಳತೆ, ಮುಗ್ದತೆ ಬೇರೆ ಯಾರಲ್ಲೂ ಇಲ್ಲ ಎಂದು ಗುಣಗಾನ ಮಾಡಿದರು.
ಇಂದು ಯಾರ ಬಳಿ ಜ್ಞಾನ ಇದೆಯೋ ಅವರು ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಜ್ಞಾನಕ್ಕೆ ಬಲ ಮತ್ತು ಬೆಲೆ ಇದೆ. ರಾಜ್ ಕುಮಾರ್ ಆ್ಯಪ್ ನಮ್ಮ ನ್ಯೂ ಎಜ್ಯುಕೇಷನ್ ಯೋಜನೆಗೆ ತುಂಬಾ ಉಪಯುಕ್ತವಾಗಲಿದೆ. ಇದಕ್ಕೆ ಬೇಕಾದ ಸಹಕಾರವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.