ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 167ನೇ ಸಿನಿಮಾ 'ದರ್ಬಾರ್' ಶೂಟಿಂಗ್ ಭರದಿಂದ ಸಾಗಿದೆ. ಆದರೆ ತಲೈವಾ ರಜನಿಕಾಂತ್ ತಮ್ಮ ಭಾಗದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದಾರೆ. ರಜನಿ ಈಗ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿ ಇದ್ದಾರೆ.
ಇತ್ತೀಚೆಗೆ ಚಿತ್ರತಂಡ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ರಜನಿಕಾಂತ್ ಈ ಸಿನಿಮಾದಲ್ಲಿ ಆದಿತ್ಯ ಅರುಣಾಚಲ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಸ್ಟುಡಿಯೋವೊಂದರಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋವೊಂದನ್ನು ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಟ್ವೀಟ್ ಮಾಡಿದ್ದಾರೆ. ಈ ಪೋಟೋದಲ್ಲಿ ರಜನಿಕಾಂತ್ ಸೋಫಾ ಮೇಲೆ ಕುಳಿತು ಡಬ್ಬಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ತಲೈವಾ ಪುತ್ರಿ ಪಾತ್ರದಲ್ಲಿ ನಿವೇದಾ ಥಾಮಸ್ ಹಾಗೂ ರಜನಿಗೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.