ಮುಂಬೈ: ಜೂನ್ 19ರಂದು ತಮಿಳುನಾಡಿನ ತೂತುಕುಡಿಯಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ವ್ಯಕ್ತಿ ಮತ್ತು ಆತನ ಮಗನ ಲಾಕಪ್ ಡೆತ್ ಪ್ರಕರಣವನ್ನು ‘ಕ್ರೂರ ಹತ್ಯೆ’ ಎಂದು ನಟ ರಜನಿಕಾಂತ್ ಖಂಡಿಇದ್ದಾರೆ.
‘#ಸತ್ಯಮಾ ವಿಡಮೇ ಕೂಡಾದ್ ಎಂದು ತಮಿಳು ಭಾಷೆಯಲ್ಲಿ ಹ್ಯಾಷ್‌ಟ್ಯಾಗ್ ಬರೆದು, ಸಿಟ್ಟಿನಿಂದ ಕುಳಿತಿರುವ ಚಿತ್ರದೊಂದಿಗೆ ತಲೈವಾ ಟ್ವೀಟ್ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಈ ಟ್ವೀಟ್ ಟ್ರೆಂಡ್ ಆಗಿದ್ದು, ಹಲವು ಜನ ಮರುಟ್ವೀಟ್ ಮಾಡಿದ್ದಾರೆ.
ಅಪ್ಪ-ಮಗನಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದನ್ನು ಇಡೀ ಮಾನವ ಸಮುದಾಯವೇ ಖಂಡಿಸುತ್ತಿರುವಾಗಲೂ ಕೆಲವು ಪೊಲೀಸರು, ನ್ಯಾಯಾಧೀಶರ ಮುಂದೆ ವರ್ತಿಸಿದ ಮತ್ತು ಮಾತನಾಡಿದ ರೀತಿ ಅಚ್ಚರಿದಾಯಕವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಸರಿಯಾದ ಶಿಕ್ಷೆಯಾಗಬೇಕು. ಇದನ್ನು ಹಾಗೆಯೇ ಬಿಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿ. ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಲಾಕ್‌ಡೌನ್ ನಿಯಮವನ್ನು ಮೀರಿ ತಮ್ಮ ಅಂಗಡಿಯನ್ನು ತೆರೆದಿದ್ದ ಕಾರಣಕ್ಕೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ಜೂನ್ 23 ರಂದು ಅವರಿಬ್ಬರೂ ಕೋವಿಲ್‌ಪಟ್ಟಿಯ ಆಸ್ಪತ್ರೆಯಲ್ಲಿ ನಿಧನರಾದರು. ಠಾಣೆಯಲ್ಲಿ ಪೊಲೀಸರು ನೀಡಿದ ಚಿತ್ರಹಿಂಸೆಯಿಂದ ಇವರು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದರು. ಈ ಘಟನೆಗೆ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.