ಚೆನ್ನೈ (ತಮಿಳುನಾಡು): ರಾಜಕೀಯಕ್ಕೆ ಪ್ರವೇಶಿಸಬಾರದು ಎಂದು ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರತಿಭಟನೆಗಳನ್ನು ಮಾಡಿ ನನ್ನನ್ನು ನೋಯಿಸಬೇಡಿ ಎಂದು ಅಭಿಮಾನಿಗಳಲ್ಲಿ ಸೂಪರ್ಸ್ಟಾರ್ ರಜಿನಿಕಾಂತ್ ಮನವಿ ಮಾಡಿದ್ದಾರೆ.
ರಜಿನಿಕಾಂತ್ ತಮ್ಮ ನಿರ್ಧಾರವನ್ನು ಬದಲಿಸಿ ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿ ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಅವರ ಅಭಿಮಾನಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ಇಂದು ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ರಜಿನಿ, ರಾಜಕೀಯಕ್ಕೆ ಪ್ರವೇಶಿಸಬಾರದೆಂಬ ನನ್ನ ನಿರ್ಧಾರವನ್ನು ವಿರೋಧಿಸಿ ನನ್ನ ಕೆಲವು ಅಭಿಮಾನಿಗಳು ಮತ್ತು ರಜನಿ ಮಕ್ಕಳ್ ಮಂದ್ರಂ ಸಂಘಟನೆಯಿಂದ ಹೊರಹಾಕಲ್ಪಟ್ಟ ಕಾರ್ಯಕರ್ತರು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾನು ನನ್ನ ನಿರ್ಧಾರವನ್ನು ತೆಗೆದುಕೊಂಡಾಗಿದೆ. ಇಂತಹ (ಪ್ರತಿಭಟನೆ) ವಿಷಯಗಳಿಂದ ನನ್ನನ್ನು ನೋಯಿಸದಂತೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿ ರಜಿನಿ ಅಭಿಮಾನಿಗಳಿಂದ ಧರಣಿ
ಅನಾರೋಗ್ಯಕ್ಕೊಳಗಾಗಿ, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ರಜಿನಿ, ತಾವು ರಾಜಕೀಯಕ್ಕೆ ಪದಾರ್ಪಣೆ ಮಾಡುವುದಿಲ್ಲ ಎಂದು ಡಿಸೆಂಬರ್ 28ರಂದು ಘೋಷಿಸಿದ್ದರು. 2021ರ ಜನವರಿಯಲ್ಲಿ ರಾಜಕೀಯ ಪಕ್ಷ ಘೋಷಿಸುವುದಾಗಿ ಹೇಳಿದ್ದ ತಲೈವಾ, ಅನಾರೋಗ್ಯದ ದೃಷ್ಟಿಯಿಂದ ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದರು.