ರಾಘವೇಂದ್ರ ರಾಜ್ಕುಮಾರ್ ಅಭಿನಯದ 'ರಾಜತಂತ್ರ' ಸಿನಿಮಾ ಮುಹೂರ್ತ ಅಕ್ಟೋಬರ್ 4 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ರಾಘವೇಂದ್ರ ರಾಜ್ಕುಮಾರ್ ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ರಾಜತಂತ್ರ' ಚಿತ್ರಕ್ಕೆ ಅಕ್ಟೋಬರ್ 4 ರಂದು ಅದ್ಧೂರಿ ಮಹೂರ್ತ - ಪಿವಿಆರ್ ಸ್ವಾಮಿ ನಿರ್ದೇಶನದ ರಾಜತಂತ್ರ
ಪಿ.ವಿ.ಆರ್. ಸ್ವಾಮಿ ನಿರ್ದೇಶನದಲ್ಲಿ ರಾಘವೇಂದ್ರ ರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ 'ರಾಜತಂತ್ರ' ಚಿತ್ರದ ಮುಹೂರ್ತ ಅಕ್ಟೋಬರ್ 4 ಭಾನುವಾರದಂದು ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಜರುಗಲಿದೆ.

ವಿಶ್ವಮ್ ಡಿಜಿಟಲ್ ಮೀಡಿಯಾ ಬ್ಯಾನರ್ ಅಡಿ ತಯಾರಾಗುತ್ತಿರುವ ಚಿತ್ರದ ಮಹೂರ್ತ ಸಮಾರಂಭಕ್ಕೆ ಡಾ. ಶಿವರಾಜ್ಕುಮಾರ್ , ಪದ್ಮಶ್ರೀ ಪುರಸ್ಕೃತ ಸಾಹಿತಿ ದೊಡ್ಡರಂಗೇಗೌಡ, ನಾದಬ್ರಹ್ಮ ಹಂಸಲೇಖ, ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹಾಗೂ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ. ಕೋವಿಡ್-19 ಸೂಚನೆಗಳನ್ನು ಸಮಾರಂಭದಲ್ಲಿ ಪಾಲಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಎಂದು ಆಹ್ವಾನ ಪತ್ರಿಕೆಯಲ್ಲಿ ಕೂಡಾ ಮನವಿ ಮಾಡಲಾಗಿದೆ.
ಹಿರಿಯ ನಟ ಶ್ರೀನಿವಾಸಮೂರ್ತಿ, ದೊಡ್ಡಣ್ಣ, ಭವ್ಯ, ಶಂಕರ್ ಅಶ್ವತ್ಥ್, ನೀನಾಸಮ್ ಅಶ್ವತ್ಥ್, ಎಂ.ಡಿ.ಕೌಶಿಕ್, ಮುನಿರಾಜು, ವೆಂಕಟೇಶ್ ಪ್ರಸಾದ್ ಹಾಗೂ ಇನ್ನಿತರರು 'ರಾಜತಂತ್ರ' ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಜೆ.ಎಂ. ಪ್ರಹ್ಲಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪಿ.ವಿ.ಆರ್. ಸ್ವಾಮಿ ಚಿತ್ರದ ಛಾಯಾಗ್ರಹಣದ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀ ಸುರೇಶ್ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ನಾಗೇಶ್ ಸಂಕಲನ ಇದೆ. ಜೆ.ಎಂ. ಪ್ರಹ್ಲಾದ್, ವಿಜಯ್ ಭಾಸ್ಕರ್ ಹಾಗೂ ಶ್ರೀಧರ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.