ಕನ್ನಡ ಚಿತ್ರರಂಗದಲ್ಲಿ ಸುಮಾರು 60 ವರ್ಷಗಳ ಕಾಲ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಜನ್ ನಾಗೇಂದ್ರ ಜೋಡಿ ದೊಡ್ಡ ಹೆಸರು ಮಾಡಿತ್ತು. ಆದರೆ 2000 ರಲ್ಲಿ ನಾಗೇಂದ್ರ ಅವರು 65 ವರ್ಷದವರಿರುವಾಗ ನಿಧನರಾಗುವ ಮೂಲಕ ರಾಜನ್-ನಾಗೇಂದ್ರ ಎಂಬ ಜೋಡಿಯ ಕೊಂಡಿ ದೂರವಾಗಿತ್ತು. ಆದರೆ ಇದೀಗ ರಾಜನ್ ಕೂಡಾ ಇಹಲೋಕ ತ್ಯಜಿಸಿದ್ದಾರೆ.
ಚಿತ್ರರಂಗದಲ್ಲಿ ಹೆಸರು ಮಾಡಿದ್ದರೂ ಕೂಡಾ ನಾಗೇಂದ್ರ ಅವರು ಯಾರಿಂದಲೂ ಯಾವ ಸಹಾಯ ಕೂಡಾ ಬಯಸಿರಲಿಲ್ಲ. ಅವರ ಆಸ್ಪತ್ರೆ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲು ಮುಂದಾಗಿತ್ತು. ಆಗಿನ ಆರೋಗ್ಯ ಸಚಿವ ಎ.ಬಿ. ಮಲಕ ರೆಡ್ಡಿ ನಾಗೇಂದ್ರ ಅವರಿಗೆ ಸಹಾಯ ಮಾಡಲು ಸಿದ್ಧರಿದ್ದರು. ಡಾ. ವಿಷ್ಣುವರ್ಧನ್, ಜಗ್ಗೇಶ್, ಶ್ರೀನಿವಾಸಮೂರ್ತಿ, ದೊಡ್ಡಣ್ಣ ಕೂಡಾ ಆಸ್ಪತ್ರೆಗೆ ಧಾವಿಸಿ ಸಹಾಯ ನೀಡಲು ಮುಂದಾದರು. ನಾಗೇಂದ್ರ ಅವರ ಪತ್ನಿ ವಿಜಯಲಕ್ಷ್ಮಿ, ಅವರೊಬ್ಬ ಸ್ವಾಭಿಮಾನಿ ಯಾರೊಂದಿಗೂ ಕೈ ನೀಡಿ ಕೇಳಲಿಲ್ಲ ಎಂದು ಧನ ಸಹಾಯವನ್ನು ತಿರಸ್ಕರಿಸಿದ್ದರು. ಆದರೆ ನಾಗೇಂದ್ರ ಅವರು ಮೊದಲೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರೆ ಆರೋಗ್ಯ ಸುಧಾರಿಸುತ್ತಿತ್ತು ಎಂದು ಕೂಡಾ ಅವರ ಪತ್ನಿ ಹೇಳಿಕೊಂಡಿದ್ದರು. ಜನರಲ್ ವಾರ್ಡ್ನಿಂದ ಸ್ಪೆಷಲ್ ವಾರ್ಡ್ಗೆ ಶಿಫ್ಟ್ ಆಗಿದ್ದೊಂದೇ ನಾಗೇಂದ್ರ ಒಂದು ತಿಂಗಳು ಅನುಭವಿಸಿದ ಸೌಕರ್ಯ ಅಷ್ಟೇ.
ಇಂದು 87 ನೇ ವಯಸ್ಸಿನಲ್ಲಿ ವಯಸ್ಸಿನಲ್ಲಿ ಅವರ ಹಿರಿಯ ಸಹೋದರ ರಾಜನ್ ವಯೋಸಹಜ ಕಾಯಿಲೆ ಇಂದ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಜೋಡಿ ಮಾಡಿದ ಮೋಡಿ ಎಂದೆಂದಿಗೂ ಅಮರ. 350ಕ್ಕೂ ಹೆಚ್ಚು ಚಿತ್ರಗಳಲ್ಲಿ 200ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಈ ಜೋಡಿ ಸಂಗೀತ ನೀಡಿತ್ತು. ಎರಡು ಕನಸು ಚಿತ್ರದ 'ಎಂದೆಂದೂ ನಿನ್ನನು ಮರೆತು ನಾ ಇರಲಾರೆ....'ಎಂಬ ಹಾಡಿಗೆ ಅನ್ವರ್ಥವಾಗಿ ಈ ರಾಜನ್ ನಾಗೇಂದ್ರ ಜೋಡಿ ಕನ್ನಡ ಚಿತ್ರರಸಿಕರ ಮನದಲ್ಲಿ ಸದಾ ಸ್ಥಾನ ಪಡೆಯುತ್ತಾರೆ.