ಕರ್ನಾಟಕ

karnataka

ETV Bharat / sitara

ಪುತ್ರಿ ಅನುಪಸ್ಥಿತಿಯಲ್ಲಿ ಹೆಬ್ಬಾಳದ ಚಿತಾಗಾರದಲ್ಲಿ ರಾಜನ್​​ ಅಂತ್ಯಕ್ರಿಯೆ

ಇಂದು ಮಧ್ಯಾಹ್ನ ಬೆಂಗಳೂರಿನ ಹೆಬ್ಬಾಳದ ಚಿತಾಗಾರದಲ್ಲಿ ರಾಜನ್ ಅಂತ್ಯಕ್ರಿಯೆ ನೆರವೇರಲಿದೆ. ರಾಜನ್ ಪುತ್ರಿ ಅಮೆರಿಕದಲ್ಲಿ ನೆಲೆಸಿದ್ದು ಅವರು ಭಾರತಕ್ಕೆ ಬರುವುದು ತಡವಾಗಲಿದೆ. ಆದ್ದರಿಂದ ಪುತ್ರಿ ಅನುಪಸ್ಥಿತಿಯಲ್ಲಿ ರಾಜನ್ ಅಂತ್ಯಕ್ರಿಯೆ ನೆರವೇರುತ್ತಿದೆ.

Rajan nagendra cremation
ರಾಜನ್​​ ಅಂತ್ಯಕ್ರಿಯೆ

By

Published : Oct 12, 2020, 10:33 AM IST

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇಂದು ನಿಧನರಾಗಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿರುವ ರಾಜನ್​ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ರಾಜನ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹೆಬ್ಬಾಳದ ಚಿತಾಗಾರದಲ್ಲಿ ರಾಜನ್ ಅಂತ್ಯಕ್ರಿಯೆ

ಬೆಂಗಳೂರಿನ ಆರ್​​​​​​​​.ಟಿ. ನಗರದ ನಿವಾಸದಲ್ಲಿ ನಿನ್ನೆ ರಾತ್ರಿ 10.30ಕ್ಕೆ ರಾಜನ್​ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಮೈಸೂರಿನವರಾದ ರಾಜನ್, ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿ ರಾಜನ್-ನಾಗೇಂದ್ರ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದರು. 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ ಸುಮಾರು ಆರು ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬರೋಬ್ಬರಿ 350ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿರುವ ಹೆಗ್ಗಳಿಕೆ ರಾಜನ್ ನಾಗೇಂದ್ರ ಅವರಿಗೆ ಸಲ್ಲುತ್ತದೆ.

ಕನ್ನಡದ ಜೊತೆ ತೆಲುಗಿನಲ್ಲೂ ಈ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ ಹೀಗೆ ಅನೇಕ ಭಾಷೆಗಳ ಸಿನಿಮಾಗಳಿಗೆ ಈ ಜೋಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾ ನಿನ್ನ ಬಿಡಲಾರೆ ಎರಡು ಕನಸು, ಬಯಲುದಾರಿ, ಆಟೋರಾಜ, ಗಂಧದಗುಡಿ, ಬೆಟ್ಟದ ಹೂವು, ಚಲಿಸುವ ಮೋಡಗಳು, ಮತ್ತೆ ಹಾಡಿತು ಕೋಗಿಲೆ, ಶ್ರೀನಿವಾಸಕಲ್ಯಾಣ ಹೀಗೆ ಕನ್ನಡದ ಸುಮಾರು 200 ಸಿನಿಮಾಗಳಿಗೆ ರಾಜನ್ ಸಂಗೀತ ನೀಡಿದ್ದಾರೆ. ಆರ್​​.ಟಿ. ನಗರದ ನಿವಾಸದಲ್ಲಿ ರಾಜನ್ ಪಾರ್ಥೀವ ಶರೀರ ಇಡಲಾಗಿದ್ದು ಅಮೆರಿಕದಲ್ಲಿ ನೆಲೆಸಿರುವ ಪುತ್ರಿ ಬಂದ ನಂತರ ಅಂತ್ಯಕ್ರಿಯೆ ಮಾಡಲಾಗುವುದು ಎನ್ನಲಾಗಿತ್ತು. ಆದರೆ ಪುತ್ರಿ ಬರುವುದು ತಡವಾಗುತ್ತಿರುವುದರಿಂದ ಇಂದು ಮಧ್ಯಾಹ್ನ 3 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ರಾಜನ್ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ABOUT THE AUTHOR

...view details