ಕನ್ನಡ ಸಿನಿಮಾಗಳಲ್ಲಿ ನಾಯಕಿಯರು ಸಾಹಸಮಯ ದೃಶ್ಯಗಳಲ್ಲಿ ಪಾಲ್ಗೊಳ್ಳುವುದು ಬಹಳ ವಿರಳ. ಒಂದು ವೇಳೆ ಭಾಗವಹಿಸಬೇಕು ಎಂದಾದಲ್ಲಿ ಆಗ ಡ್ಯೂಪ್ ಬಳಸುವುದು ಸಾಮಾನ್ಯ. ಆ್ಯಕ್ಷನ್ ಸೀನ್ಗಳಲ್ಲಿ ಆಸಕ್ತಿಯಿಂದ ಭಾಗವಹಿಸುವುದು ಕೆಲವೇ ನಟಿಯರು ಮಾತ್ರ.
ಇದಕ್ಕೆ ಮತ್ತೊಂದು ಕಾರಣವೆಂದರೆ ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಕಡಿಮೆಯಾಗುತ್ತಿರುವುದು. ಅಪರೂಪಕ್ಕೆ ಒಮ್ಮೆ ಎಂಬಂತೆ ಕೆಲವೇ ನಟಿಯರಿಗೆ ಮಾತ್ರ ಆ್ಯಕ್ಷನ್ ಸನ್ನಿವೇಶಗಳಲ್ಲಿ ನಟಿಸುವ ಅವಕಾಶ ದೊರೆಯುತ್ತದೆ. ಇದೀಗ ನಾಯಕಿ ಸಂಜನಾ ಬುರ್ಲಿ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಆ್ಯಕ್ಷನ್ ಸನ್ನಿವೇಶಕ್ಕಾಗಿ ಅವರು ಮೋಟಾರ್ ಬೈಕ್ ಓಡಿಸಿದ್ದಾರೆ. ಈಗಾಗಲೇ ಕೆಲವು ನಾಯಕಿಯರು ಬೈಕ್ ಓಡಿಸಿರುವ ದೃಶ್ಯಗಳನ್ನು ಸಿನಿಮಾಗಳನ್ನು ನೋಡಿದ್ದೇವೆ. ಸಂಜನಾ ಬುರ್ಲಿ ಈ ಸಿನಿಮಾಗಾಗಿ ಬೈಕ್ ರೈಡಿಂಗ್ ಕಲಿತು ಓಡಿಸಿದ್ದಾರೆ.
'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ಸಂಜನಾ ಬುರ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಂತರ್ ಧರ್ಮೀಯ ನಾಯಕ-ನಾಯಕಿ ಒಬ್ಬರನೊಬ್ಬರು ಪ್ರೀತಿಸುತ್ತಾರೆ. ಇವರ ವಿಚಾರ ತಿಳಿದ ಕೆಲವರು ರಾಧಾಳನ್ನು ಅಪಹರಣ ಮಾಡುತ್ತಾರೆ. ಇವರೆಲ್ಲರನ್ನೂ ಎದುರಿಸಿ ರಾಧಾ ಹೇಗೆ ಸೇವ್ ಆಗುತ್ತಾಳೆ ಎಂಬ ದೃಶ್ಯವನ್ನು ಇತ್ತಿಚೆಗೆ ಚಿತ್ತೀಕರಿಸಲಾಯ್ತು. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ.
ಮಂಗಳೂರು, ಮೈಸೂರು, ಹಾಸನ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಸೆಲಬ್ರಿಟಿ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ರಾಘವ್ ರಮಣ ಈ ಚಿತ್ರದ ನಾಯಕ. ಸಂಜನಾ ಬುರ್ಲಿ ಈಗಾಗಲೇ 'ವೀಕ್ ಎಂಡ್' ಸಿನಿಮಾದಲ್ಲಿ ನಟಿಸಿದ್ದಾರೆ. ಗೋಪಿನಾಥ್ ಭಟ್, ಯಮುನಾ ಶ್ರೀನಿಧಿ, ರೇಖಾಜಾನ್, ಪ್ರದೀಪ್ ತಿಪಟೂರು, ಚಿರಾಗ್ ಗೌಡ , ಗುರು ಹೆಗ್ಡೆ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.
ಸಾಹಸ ಕಲಾವಿದ ಮೈಸೂರಿನ ಎಂ.ಎನ್. ಶ್ರೀಕಾಂತ್ ಈ ಚಿತ್ರಕ್ಕೆ ಕಥೆ ಬರೆದು, ಸಾಹಸ ಹಾಗೂ ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ. ಸಂತೋಷ್ ನಾಯಕ್ ಸಾಹಿತ್ಯಕ್ಕೆ ತೆಲುಗಿನ ನವನೀತ್ ಚೆರ್ರಿ ರಾಗ ಸಂಯೋಜನೆ ಮಾಡಿದ್ದಾರೆ. ಸೋನು ನಿಗಮ್, ಅನುರಾಧಾ ಭಟ್ ಹಾಗೂ ನವೀನ್ ಸಜ್ಜು ಹಾಡುಗಳನ್ನು ಹಾಡಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ಯಶಸ್ವಿ ಶಂಕರ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಲಾಕ್ಡೌನ್ ಸಡಿಲಿಕೆ ನಂತರ ಸಿನಿಮಾ ಬಿಡುಗಡೆಯಾಗಲಿದೆ.