ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಬಹಳ ಬ್ಯುಸಿ ಹಾಗೂ ಬೇಡಿಕೆಯಲ್ಲಿರುವ ನಟಿ ಎಂದರೆ ರಚಿತಾ ರಾಮ್. 'ಬುಲ್ ಬುಲ್' ಚಿತ್ರದ ಕಾವೇರಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಚಿತಾ ರಾಮ್ ಅವರಿಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ 2013 ರಿಂದ ಇದುವರೆಗೂ ಸುಮಾರು 15 ಸಿನಿಮಾಗಳಲ್ಲಿ ರಚಿತಾ ಸ್ಟಾರ್ ನಟರೊಂದಿಗೆ ನಟಿಸಿ ಹೆಸರು ಮಾಡಿದ್ದಾರೆ. ಕೆಲವೊಂದು ಚಿತ್ರಗಳಲ್ಲಿ ಅವರು ಅತಿಥಿ ನಟಿ ಆಗಿ ಕೂಡಾ ಬಂದು ಹೋಗಿದ್ದಾರೆ. ಈ ವರ್ಷ ರಚಿತಾ ರಾಮ್ ಸುಮಾರು 11 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಸಿನಿಮಾಗಳು ವಿವಿಧ ಹಂತದಲ್ಲಿವೆ.
ತಮ್ಮ 7 ವರ್ಷಗಳ ಸಿನಿಪಯಣದಲ್ಲಿ ರಚಿತಾ ರಾಮ್ ಬಿಡುಗಡೆ ಆಗಿರುವ ಮತ್ತು ಬಿಡುಗಡೆ ಆಗಬೇಕಿರುವ ಸಿನಿಮಾಗಳು 30 ದಾಟುತ್ತವೆ. ಇಷ್ಟು ಕಡಿಮೆ ಸಮಯದಲ್ಲಿ ಬಹುಶ: ಯಾವ ನಟಿಯೂ ಈ ಯಶಸ್ಸು ಸಂಪಾದಿಸಿಲ್ಲ ಎಂದು ಹೇಳಬಹುದು. ಬುಲ್ ಬುಲ್, ಅಂಬರೀಷ, ದಿಲ್ ರಂಗೀಲಾ, ರನ್ನ, ರಥಾವರ, ಚಕ್ರವ್ಯೂಹ, ಜಗ್ಗುದಾದಾ, ಭರ್ಜರಿ, ಅಯೋಗ್ಯ, ದಿ ವಿಲನ್, ಸೀತಾರಾಮ ಕಲ್ಯಾಣ, ನಟಸಾರ್ವಬೌಮ, ಐ ಲವ್ ಯು, ಭರಾಟೆ ಸಿನಿಮಾಗಳು ಯಶಸ್ಸು ಕಂಡಿದೆ.
ವಿವಿಧ ಹಂತದಲ್ಲರುವ ರಚಿತಾ ಅಭಿನಯದ 11 ಚಿತ್ರಗಳು ಏಕ್ ಲವ್ ಯಾ, 100, ಡಾಲಿ, ಏಪ್ರಿಲ್, ಸೂಪರ್ ಮಚ್ಚಿ, ಸೀರೆ, ಪಂಥ, ರವಿ ಬೋಪಣ್ಣ, ಸಂಜಯ್ ಅಲಿಯಾಸ್ ಸಂಜು, ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಹಾಗೂ ಲಿಲ್ಲಿ ಚಿತ್ರಗಳು ವಿವಿಧ ಹಂತದಲ್ಲಿದ್ದು ಈ ವರ್ಷ ಅಥವಾ 2021 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 'ಲಿಲ್ಲಿ' ಚಿತ್ರದ ಪೋಸ್ಟರ್ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಆಗಿದೆ. ಅದರಲ್ಲಿ ರಚಿತಾ ರಾಮ್ ಡಾಕ್ಟರ್ ಪಾತ್ರ ಮಾಡುತ್ತಿದ್ದಾರೆ. ನಾಗರಾಜ್ ಮತ್ತು ಎಸ್. ಸುಬ್ರಮಣಿ ನಿರ್ಮಾಣದ ಈ ಚಿತ್ರವನ್ನು ವಿಜಯ್. ಎಸ್. ಗೌಡ ನಿರ್ದೇಶಿಸಿದ್ದಾರೆ.
ರಮೇಶ್ ಅರವಿಂದ್ ಜೊತೆ 100, ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ ' ಬಿಡುಗಡೆ ಹಂತದಲ್ಲಿದೆ. 'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ', ತೆಲುಗು ಹಾಗೂ ಕನ್ನಡದಲ್ಲಿ ತಯಾರಾಗುತ್ತಿರುವ 'ಸೂಪರ್ ಮಚ್ಚಿ ' ಚಿತ್ರೀಕರಣ ಬಹುತೇಕ ಮುಗಿದಿದೆ.