ಪುಟ್ಟಣ್ಣ ಕಣಗಾಲ್, ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ದೇಶಕ. ಇದುವರೆಗೂ ಪುಟ್ಟಣ್ಣ ಕಣಗಾಲ್ ಬೆಳೆದ ಎತ್ತರಕ್ಕೆ ಕನ್ನಡದ ಯಾವ ನಿರ್ದೇಶಕರೂ ಏರಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ರಾಜ್ಯ ಸರ್ಕಾರ ಕನ್ನಡ ಚಲನಚಿತ್ರ ನಿರ್ದೇಶಕರಿಗೆ ನೀಡುತ್ತಿರುವ ಎಸ್.ಆರ್. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯೇ ಇದಕ್ಕೆ ಸಾಕ್ಷಿ.
ಪುಟ್ಟಣ್ಣ ಕಣಗಾಲ್ ಜೀವನ, ವೈವಿಧ್ಯಮಯ ಬದುಕು, ಅವರು ನಿರ್ದೇಶಿಸಿದ ಸಿನಿಮಾಗಳು ಇಂದಿಗೂ ಮಾದರಿಯಾಗಿದೆ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅವರು ಮಾಡಿರುವ ಚಿತ್ರಗಳು ಬುನಾದಿ ಎಂದೇ ಹೇಳಬಹುದು. ಇಂದು ಜೂನ್ 5. ಪುಟ್ಟಣ್ಣ ಕಣಗಾಲ್ ನಮ್ಮನ್ನು ಅಗಲಿ ಇಂದಿಗೆ 35 ವರ್ಷಗಳು ತುಂಬಿದೆ. ಈ ವಿಶೇಷ ದಿನದಂದು ಅವರ ಜೀವನದ ಪಯಣದ ಬಗ್ಗೆ ಒಂದು ಕಿರು ಮಾಹಿತಿ.
ಡಾ. ರಾಜ್ಕುಮಾರ್ ಜೊತೆ ಪುಟ್ಟಣ್ಣ ಕಣಗಾಲ್ ಪುಟ್ಟಣ್ಣ ಕಣಗಾಲ್ ಜನಿಸಿದ್ದು 1933 ಡಿಸೆಂಬರ್ 1. ಚಿಕ್ಕಂದಿನಿಂದ ನಾಟಕ, ಸಿನಿಮಾಗಳ ಬಗ್ಗೆ ಆಸಕ್ತಿ ಇದ್ದ ಪುಟ್ಟಣ್ಣ ಕೊನೆಗೂ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡರು. ತಮ್ಮ 31 ನೇ ವಯಸ್ಸಿನಲ್ಲಿ ಗುರುಗಳಾದ ಬಿ.ಆರ್. ಪಂತುಲು ಅವರ ಬೆಂಬಲದಿಂದ ಮಲಯಾಳಂ ಭಾಷೆಯಲ್ಲಿ 'ಸ್ಕೂಲ್ ಮಾಸ್ಟರ್' ಚಿತ್ರವನ್ನು ನಿರ್ದೇಶಿಸಿದರು. ಇದೇ ಚಿತ್ರ ಮುಂದೆ ಕನ್ನಡದಲ್ಲಿ ಕೂಡಾ ತಯಾರಾಗಿ ಹೆಸರು ಗಳಿಸಿತು. ವಿಶೇಷ ಎಂದರೆ ಮಲಯಾಳಂ 'ಸ್ಕೂಲ್ ಮಾಸ್ಟರ್' ಚಿತ್ರವನ್ನು ಬಿ.ಆರ್. ಪಂತುಲು ನಿರ್ದೇಶಿಸಬೇಕಿತ್ತು. ಆದರೆ ಶಿಷ್ಯ ಪುಟ್ಟಣ್ಣ ಅವರಿಗೆ ಚಿತ್ರದ ಮೇಲಿದ್ದ ಪ್ರೀತಿ, ಚಾಕಚಕ್ಯತೆ, ಪರಿಶ್ರಮ ಕಂಡು ತಾವು ಮಾಡಬೇಕಿದ್ದ ಚಿತ್ರವನ್ನು ಅವರಿಗೆ ನೀಡಿದರು.
ಚಿತ್ರವೊಂದರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಪುಟ್ಟಣ್ಣ 3 ಮಲಯಾಳಂ ಚಿತ್ರಗಳು, 1 ತೆಲುಗು ಸಿನಿಮಾ ನಿರ್ದೇಶನ ಮಾಡಿದ ನಂತರ 1966 ರಲ್ಲಿ 'ಬೆಳ್ಳಿ ಮೋಡ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸ್ವತಂತ್ರ ನಿರ್ದೇಶಕರಾಗಿ ಅಡಿಯಿಟ್ಟರು ಪುಟ್ಟಣ್ಣ. ಬೆಳ್ಳಿ ಪರದೆಯಲ್ಲಿ ಕೇವಲ ನಾಯಕ ಪಡೆಯುತ್ತಿದ್ದ ಶಿಳ್ಳೆ, ಚಪ್ಪಾಳೆ ನಂತರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೂ ದೊರೆಯಿತು.
ಮಲ್ಲಮ್ಮನ ಪವಾಡ, ಗೆಜ್ಜೆಪೂಜೆ, ಕಪ್ಪು ಬಿಳುಪು, ಕರುಳಿನ ಕರೆ, ಶರಪಂಜರ, ಸಾಕ್ಷಾತ್ಕಾರ, ನಾಗರಹಾವು, ಎಡಕಲು ಗುಡ್ಡದ ಮೇಲೆ, ಉಪಾಸನೆ, ಕಥಾ ಸಂಗಮ, ಬಿಳಿ ಹೆಂಡ್ತಿ, ಫಲಿತಾಂಶ, ಕಾಲೇಜು ರಂಗ, ರಂಗನಾಯಕಿ, ಮಾನಸ ಸರೋವರ, ಧರಣಿ ಮಂಡಲ ಮಧ್ಯದೊಳಗೆ, ಅಮೃತ ಘಳಿಗೆ, ಋಣ ಮುಕ್ತಳು ಸೇರಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ ಪುಟ್ಟಣ್ಣ ಅವರ ಕಡೆಯ ಸಿನಿಮಾ 1984 ರಲ್ಲಿ ಬಂದ 'ಮಸಣದ ಹೂವು'. ಪುಟ್ಟಣ್ಣ ಅವರು ಬಹಳ ವರ್ಷಗಳ ಹಿಂದೆ ನಿರ್ದೇಶನ ಮಾಡಿ ಅರ್ಧದಲ್ಲೇ ನಿಂತಿದ್ದ 'ಸಾವಿರ ಮೆಟ್ಟಿಲು' ಚಿತ್ರವನ್ನು ಅವರ ನಿಧನದ ನಂತರ ಕೆ.ಎಸ್.ಎಲ್. ಸ್ವಾಮಿ 2006 ರಲ್ಲಿ ಪೂರ್ತಿಗೊಳಿಸಿ ಬಿಡುಗಡೆ ಮಾಡಿದ್ದರು.
ಪುಟ್ಟಣ್ಣ ಕಣಗಾಲ್ ಅದೆಷ್ಟೋ ಪ್ರತಿಭೆಗಳನ್ನು ಹುಟ್ಟು ಹಾಕಿದ್ದಾರೆ. ಅವರಲ್ಲಿ ಬಹುತೇಕ ಎಲ್ಲರೂ ಹೆಮ್ಮರವಾಗಿ ಬೆಳೆದಿದ್ದಾರೆ. 'ಮಾನಸ ಸರೋವರ', 'ಧರಣಿ ಮಂಡಲ ಮಧ್ಯದೊಳಗೆ' ಹಾಗೂ 'ಅಮೃತ ಘಳಿಗೆ' ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಹಿರಿಯ ದಿಗ್ಗಜ ಬಿ.ಎಸ್. ಬಸವರಾಜ್ ಅವರು ಪುಟ್ಟಣ್ಣ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪುಟ್ಟಣ್ಣ ನಿಜವಾಗಿಯೂ ಕಲಾವಿದರಿಗೆ ಹೊಡೆಯುತ್ತಿದ್ರಾ..?
ಪುಟ್ಟಣ್ಣ ಕಣಗಾಲ್ ಅವರು ಬಹಳ ಕೋಪಿಷ್ಟ, ಸರಿಯಾಗಿ ಕೆಲಸ ಮಾಡದಿದ್ದರೆ ಅವರು ಹೊಡೆಯುತ್ತಾರೆ, ಬೈಯ್ಯುತ್ತಾರೆ, ಅವರ ಬಳಿ ಕೆಲಸ ಮಾಡುವುದು ಬಹಳ ಕಷ್ಟ ಎಂದು ಬಹಳಷ್ಟು ಮಂದಿ ಮಾತನಾಡುತ್ತಿದ್ದರು. ಈ ವಿಚಾರ ಬಸವರಾಜ್ ಅವರ ಕಿವಿಗೂ ಬಿದ್ದಿದೆ. ಆದರೆ ಅವರ ಗುರುಗಳಾದ ಡಿ.ವಿ. ರಾಜಾರಾಂ ಮತ್ತು ಸ್ನೇಹಿತ ರಾಜಮಣಿ ಒತ್ತಾಯ ಮಾಡಿದ್ದರಿಂದ 'ಮಾನಸ ಸರೋವರ' ಚಿತ್ರದ ವೇಳೆ ಬಸವರಾಜ್, ಪುಟ್ಟಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಆ ಚಿತ್ರಕ್ಕೆ ಬಸವರಾಜ್ ಅವರೇ ಛಾಯಾಗ್ರಹಣ ಮಾಡಿದ್ದರು. ಅಷ್ಟರಲ್ಲಿ ಪುಟ್ಟಣ್ಣ ಕಣಗಾಲ್ ಕೂಡಾ ಬಸವರಾಜ್ ಬಗ್ಗೆ ತಿಳಿದಿದ್ದರು. ಅವರ ನೈಪುಣ್ಯತೆಯನ್ನು 'ಅಂದದ ಅರಮನೆ' ಚಿತ್ರೀಕರಣದ ಸಮಯದಲ್ಲಿ ನೋಡಿದ್ದರು.
ನಾಗರಹಾವು ಚಿತ್ರದಲ್ಲಿ ಡಾ. ವಿಷ್ಣುವರ್ಧನ್ 'ಬಾಡದ ಹೂವು' ಸಿನಿಮಾದಲ್ಲಿ ಕವ್ವಾಲಿ ಹಾಡಿಗೆ ಬಿ.ಎಸ್. ಬಸವರಾಜ್ ಅವರೇ ಚಿತ್ರೀಕರಣ ಮಾಡಿದ್ದು ಎಂದು ಅವರಿಗೆ ತಿಳಿದಿತ್ತು. ಆಗಲೇ 8 ತಮಿಳು ಚಿತ್ರಗಳಲ್ಲಿ ಬಸವರಾಜ್ ಕೆಲಸ ಮಾಡಿದ್ದರು. 'ಮಾನಸ ಸರೋವರ' ಚಿತ್ರದಿಂದ ಅನೇಕ ವರ್ಷಗಳ ಕಾಲ ಪುಟ್ಟಣ್ಣ ಕಣಗಾಲ್ ಜೊತೆ ಕೆಲಸ ಮಾಡಿದ ಬಸವರಾಜ್ ಅವರಿಗೆ ಪುಟ್ಟಣ್ಣ ಒಮ್ಮೆಯೂ ರೇಗಿರುವುದು, ಬೈದಿರುವುದು ನೆನಪೇ ಇಲ್ಲವಂತೆ. ಏಕೆಂದರೆ ಪುಣ್ಣಣ್ಣ ಅವರಿಗೆ ಬೇಕಾಗಿದ್ದು ಪರಿಪೂರ್ಣ ಕೆಲಸ. ಕಲಾವಿದರಾಗಲೀ, ತಂತ್ರಜ್ಞರಾಗಲಿ ಶ್ರಮ, ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದು ಪುಟ್ಟಣ್ಣ ಅವರು ಬಯಸುತ್ತಿದ್ದರು.
ಇನ್ನು ಪುಟ್ಟಣ್ಣ ಕೇವಲ ನಿರ್ದೇಶಕರಾಗಿ ಉಳಿದಿರಲಿಲ್ಲ. ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಗೀತದ ಬಗ್ಗೆಯೂ ಅವರಿಗೆ ಅರಿವಿತ್ತು. ಎಲ್ಲವನ್ನೂ ಕಲಿಯುವ ಉತ್ಸಾಹ ಅವರಲ್ಲಿತ್ತು. ಪ್ರೇಕ್ಷಕ ಏನು ಬಯಸುತ್ತಾನೆ ಎಂಬ ವಿಚಾರ ಅವರಿಗೆ ಚೆನ್ನಾಗಿ ಅರಿವಿತ್ತು. ಅವರು ಹೆಚ್ಚಾಗಿ ಕಾದಂಬರಿ ಆಧಾರಿತ ಸಿನಿಮಾಗಳನ್ನು ಮಾಡುತ್ತಿದ್ದರು. ಕಲಾವಿದರಲ್ಲಿ ಪ್ರತಿಭೆಯನ್ನು ಹೆಕ್ಕಿ ತೆಗೆಯುತ್ತಿದ್ದರು ಎಂದು ಬಸವರಾಜ್ ಪುಟ್ಟಣ್ಣ ಅವರನ್ನು ನೆನೆದಿದ್ದಾರೆ.
ಚಿತ್ರಬ್ರಹ್ಮನೊಂದಿಗೆ ಬಿ.ಎಸ್. ಬಸವರಾಜ್ ಕಾರು ಚಾಲಕರಾಗಿದ್ದ ಚಿತ್ರಬ್ರಹ್ಮ
'ಮಾನಸ ಸರೋವರ' ಚಿತ್ರದ 'ನೀನೇ ಸಾಕಿದಾ ಗಿಣಿ' ಹಾಡಿನ ಚಿತ್ರೀಕರಣದ ಸಮಯದಲ್ಲಿ ಮೂರು ದಿನಗಳ ಕಾಲ ಪುಟ್ಟಣ್ಣ ಅವರು ಕಾರು ಚಾಲಕರಾಗಿದ್ದ ವಿಚಾರವನ್ನು ಕೂಡಾ ಬಸವರಾಜ್ ಹೇಳಿಕೊಂಡಿದ್ದಾರೆ. ಬಳ್ಳಾರಿಯ ಸಂಡೂರು ಮೈನ್ಸ್ ಬಳಿ ಈ ಹಾಡಿನ ಚಿತ್ರೀಕರಣ ಜರುಗುತ್ತಿದ್ದ ವೇಳೆ, ಕಾರಿನ ಬಾನೆಟ್ ಮೇಲೆ ಬಸವರಾಜು ಅವರೊಂದಿಗೆ ಕ್ಯಾಮರಾವನ್ನು ಕಟ್ಟಿ ಆ ಕಾರನ್ನು ಹಾಡಿನ ಚಿತ್ರೀಕರಣ ಮುಗಿಯುವವರೆಗೂ ತಾವೇ ಚಾಲನೆ ಮಾಡಿದ್ದರಂತೆ ಪುಟ್ಟಣ್ಣ ಕಣಗಾಲ್.
ಶ್ರೀನಾಥ್, ಪುಟ್ಟಣ್ಣ ಕಣಗಾಲ್ ಬಸವರಾಜ್ ಹೇಳುವ ಪ್ರಕಾರ ಪುಟ್ಟಣ್ಣ ಕಣಗಾಲ್ ಅವರು ಬೆಳಗ್ಗೆ 7 ಗಂಟೆಗೆ ಚಿತ್ರೀಕರಣ ಆರಂಭಿಸಿದರೆ 11.30 ಕ್ಕೆ ನಿಲ್ಲಿಸುತ್ತಿದ್ದರಂತೆ. ಮತ್ತೆ 3 ರಿಂದ ಸಂಜೆ 5 ವರೆಗೆ ಚಿತ್ರೀಕರಣ ಮಾಡುತ್ತಿದ್ದರಂತೆ. ಏಕೆಂದರೆ ಅವರು ಎಂದಿಗೂ ಚಿತ್ರೀಕರಣಕ್ಕೆ ಹೆಚ್ಚು ಸೂರ್ಯನ ಬೆಳಕನ್ನು ಬಯಸುತ್ತಿರಲಿಲ್ಲವಂತೆ. ಇದೇ ರೀತಿ 35 ದಿನಗಳಲ್ಲಿ 'ಮಾನಸ ಸರೋವರ' ಚಿತ್ರೀಕರಣ ಮಾಡಲಾಗಿದೆ. ಪುಟ್ಟಣ್ಣ ಅವರ ಜೊತೆ ಒಂದೇ ಸಿನಿಮಾ ಸಾಕು ಅಂತ ಹೋಗಿದ್ದ ಬಿ.ಎಸ್. ಬಸವರಾಜ್, ಪುಟ್ಟಣ್ಣ ಅವರ ಶಕ್ತಿ ಸಾಮರ್ಥ್ಯಕ್ಕೆ ಬೆರಗಾಗಿ ಅವರೊಂದಿಗೆ ಮತ್ತೆ ಎರಡು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.
ಡಾ. ರಾಜ್ಕುಮಾರ್, ಪುಟ್ಟಣ್ಣ ಬಸವರಾಜ್ ಅವರು ಕನ್ನಡ, ತಮಿಳು, ಹಿಂದಿ ಹಾಗೂ ಇನ್ನಿತರ ಭಾಷೆಗಳ ಸುಮಾರು 100 ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದವರು. ಪುಟ್ಟಣ್ಣ ಕಣಗಾಲ್ ಬೆಂಗಳೂರಿನ ಭಕ್ತಾರಾಮ್ ಆಸ್ಪತ್ರೆಯಲ್ಲಿ ಹೃದಯದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ಧಾಗ ಕೂಡಾ ಅವರನ್ನು ನೋಡಿ ಮಾತನಾಡಿಸಿ ಬಂದಿದ್ದಾರೆ. ಆದರೆ ಚಿಕ್ಕ ವಯಸ್ಸಿಗೆ ಪುಟ್ಟಣ್ಣ ನಮ್ಮನ್ನು ಅಗಲಿದ್ದು ಬೇಸರದ ಸಂಗತಿ ಎಂದು ನೋವಿನಿಂದ ಹೇಳುತ್ತಾರೆ ಬಸವರಾಜ್. 1985 ಜೂನ್ 5 ರಂದು ಚಿತ್ರಬ್ರಹ್ಮ ತಮ್ಮ ಜೀವನದ ಪಯಣವನ್ನು ಮುಗಿಸಿದ್ದರು.
ಮಿನುಗುತಾರೆ ಕಲ್ಪನಾ ಅವರೊಂದಿಗೆ ಚಿತ್ರಬ್ರಹ್ಮ ಒಟ್ಟಿನಲ್ಲಿ ಪುಟ್ಟಣ್ಣ ಕಣಗಾಲ್ ಇಡೀ ಕನ್ನಡ ಚಿತ್ರರಂಗಕ್ಕೆ ಮಾದರಿಯಾಗಿರುವುದಂತೂ ನಿಜ. ಇಂದಿನ ಪೀಳಿಗೆ ಅವರ ಚಿತ್ರಗಳನ್ನು ನೋಡಿ ಕಲಿಯುವಂತದ್ದು ಸಾಕಷ್ಟಿದೆ.