ಬೆಂಗಳೂರು :ರಾಜಕೀಯ ಮತ್ತು ಚುನಾವಣಾ ಪ್ರಚಾರದಿಂದ ದೂರವೇ ಇರಬೇಕೆಂಬ ನಿಲುವಿಗೆ 'ಪವರ್ ಸ್ಟಾರ್' ಪುನೀತ್ ರಾಜ್‍ಕುಮಾರ್ ಕೊನೆವರೆಗೂ ಬದ್ಧರಾಗಿದ್ದರು.
ವರನಟ ಡಾ. ರಾಜ್ ಕುಮಾರ್ ಅವರಾಗಲಿ ಅಥವಾ ಅವರ ಕುಟುಂಬ ಸದಸ್ಯರಾಗಲಿ ರಾಜಕೀಯ ಮತ್ತು ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದರು.
ಹಾಗಾಗಿ, ಪುನೀತ್ ರಾಜ್‍ಕುಮಾರ್ ಸರ್ಕಾರದ ಇಲಾಖೆಗಳಿಗೆ ರಾಯಭಾರಿಯಾಗಿದ್ದರೆ ಹೊರತು, ಯಾವತ್ತೂ ಯಾವುದೇ ರಾಜಕೀಯ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ.
ಸಿಎಂ ಬಸವರಾಜ ಬೊಮ್ಮಾಯಿ ಜೊತೆ ನಟ ಪುನೀತ್ ರಾಜ್‍ಕುಮಾರ್ ಆದರೆ, ರಾಜಕೀಯ ಕುಟುಂಬದಿಂದ ಬಂದ ಗೀತಾ ಶಿವರಾಜ್ ಕುಮಾರ್ ಅವರು 2014ರಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಜೆಡಿಎಸ್ ಪರ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಣಕ್ಕಿಳಿದಿದ್ದರು.
ಆಗ ಶಿವರಾಜ್ ಕುಮಾರ್ ಮಾತ್ರ ಪ್ರಚಾರದಲ್ಲಿ ಭಾಗಿಯಾಗಿದ್ದು ಬಿಟ್ಟರೆ, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಅವರಾಗಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ.
ರಾಜ್ ಕುಮಾರ್ ಕುಟುಂಬದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಹೆಚ್ಚಾಗಿ ನಿರ್ಣಯ ತೆಗೆದುಕೊಳ್ಳುತ್ತಿದ್ದದ್ದು ರಾಘವೇಂದ್ರ ರಾಜ್ ಕುಮಾರ್. ಅದನ್ನು ಚಾಚೂ ತಪ್ಪದೆ ಅಣ್ಣ ಮತ್ತು ತಮ್ಮ ಪರಿಪಾಲಿಸುತ್ತಿದ್ದರು.
ಆದರೆ, ಅತ್ತಿಗೆ (ಗೀತಾ) ಚುನಾವಣೆಗೆ ಸ್ಪರ್ಧಿಸಿದ್ದಾಗ ತಮ್ಮಂದಿರಿಬ್ಬರೂ ಪ್ರಚಾರಕ್ಕೆ ಬರುವುದಿಲ್ಲವೆಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ನಟ ಪುನೀತ್ ರಾಜ್‍ಕುಮಾರ್ ಡಾ. ರಾಜ್‍ಕುಮಾರ್ ಅವರು ತಮ್ಮ ಜೀವನದುದ್ದಕ್ಕೂ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ, ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿ ಗೀತಾರ ಮುಖಾಂತರ ರಾಜಕೀಯಕ್ಕೆ ಪರೋಕ್ಷ ಎಂಟ್ರಿ ಕೊಟ್ಟಿದ್ದರು.
ಇದು ಕಿರಿಯ ಸೋದರರ ಅಸಮಾಧಾನಕ್ಕೆ ಕಾರಣವಾಗಿತ್ತಾ?. ಹಾಗಾಗಿಯೇ ಚುನಾವಣಾ ಪ್ರಚಾರದಿಂದ ದೂರ ಉಳಿದರಾ? ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದವು.
ಮಂಡ್ಯದಲ್ಲಿ ನಟಿ ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಪುನೀತ್ ರಾಜ್‍ಕುಮಾರ್ ಪ್ರಚಾರದಿಂದ ದೂರ ಉಳಿದಿದ್ದರು. ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಸ್ವತಃ ಪುನೀತ್ ಹೇಳಿದ್ದರು.
ಓದಿ:ಬಾಲ ನಟನಾಗಿ ವೃತ್ತಿ ಆರಂಭಿಸಿ ಪ್ರಶಸ್ತಿ ಬಾಚಿ ಬಹುಬೇಗ ಪಯಣ ಮುಗಿಸಿದ ಪುನೀತ್..