ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್, ಪ್ರಯೋಗಾತ್ಮಕ ಚಿತ್ರಗಳ ಮಧ್ಯೆ ಭಕ್ತಿ ಪ್ರಧಾನ ಸಿನಿಮಾಗಳು ಗಮನ ಸೆಳೆಯುತ್ತವೆ. ಇದೀಗ ಮಹಾಮಹಿಮ ಸಿದ್ಧಾರೂಢರ ಜೀವನಾಧಾರಿತ ಚಿತ್ರವೊಂದು ನಿರ್ಮಾಣವಾಗಿದೆ.
ಮಹಾಯೋಗಿ ಸಿದ್ಧಾರೂಢ ಎಂಬ ಹೆಸರಿನ ಈ ಚಿತ್ರವನ್ನು ಸಾಧುಕೋಕಿಲ ನಿರ್ದೇಶಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಟ್ರೇಲರ್ ಅನ್ನು ಬಿಡುಗಡೆ ಮಾಡಿದರು.
ಈ ಬಗ್ಗೆ ನಟ ಪುನೀತ್ ರಾಜ್‍ಕುಮಾರ್ ಮಾತನಾಡಿ, ನಮ್ಮ ಮನೆಗೂ, ಸಿದ್ಧಾರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಅವರಾಗಲಿ, ನಮ್ಮ ಕುಟುಂಬದ ಯಾರೇ ಆಗಲಿ, ಹುಬ್ಬಳ್ಳಿಗೆ ಹೋದಾಗ ಸಿದ್ಧಾರೂಢರ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಅವರು ಕೆಲವು ದಿನಗಳ ಕಾಲ ಈ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಬರಬೇಕೆಂದು ಸಾಧುಕೋಕಿಲ ಅವರು ಕರೆದಾಗ ಸಂತೋಷವಾಯಿತು. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ ಎಂದರು.
ಶರಣ ಶ್ರೇಷ್ಠರಾದ ಸಿದ್ಧಾರೂಢರ ಜೀವನಾಧಾರಿತ ಚಿತ್ರ ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ಮಂಟೂರಿನ ಗುರುಗಳು ನನ್ನನ್ನ ಕರೆದು ಈ ರೀತಿಯ ಚಿತ್ರ ಮಾಡಿಕೊಡಬೇಕೆಂದು ಹೇಳಿದರು. ಈ ಸಲುವಾಗಿ ನನ್ನನ್ನು ದೆಹಲಿಗೆ ಕಳುಹಿಸಿ ಅಲ್ಲಿ ಸ್ವಾಮಿನಾರಾಯಣ ಆಶ್ರಮದಲ್ಲಿ ಗುರುಗಳ ಕುರಿತು ಚಿತ್ರ ಮಾಡಿದ್ದಾರೆ. ನೋಡಿ ಬನ್ನಿ ಎಂದರು. ನೋಡಿ ಬಂದೆ. ಎಲ್ಲರಿಗೂ ಸಾಧುಕೋಕಿಲ, ಇಂತಹ ಚಿತ್ರ ಮಾಡಿದ್ದಾರಾ? ಎಂಬ ಆಶ್ಚರ್ಯ. ನನಗೂ ಮೊದಲು ಹಾಗೆ ಅನಿಸಿತು ಎಂದು ಸಂಗೀತ ನಿರ್ದೇಶಕ ಸಾಧುಕೋಕಿಲ ತಿಳಿಸಿದರು.
ಹೆಚ್ಚಿನ ಜನ ಹುಬ್ಬಳ್ಳಿಯ ಸಿದ್ಧಾರೂಢ ಮಠ ನೋಡಿರುತ್ತೀರಿ. ಆದರೆ, ಮಂಟೂರಿನ ಸಿದ್ಧಾರೂಢ ಮಠಕ್ಕೆ ಹೋಗಿ ಬನ್ನಿ. ಒಂದು ರೀತಿ ಸ್ವಾಮಿನಾರಾಯಣ ಮಂದಿರ ಇದ್ದ ಹಾಗೆ ಇದೆ. ನಮ್ಮ ಚಿತ್ರದಲ್ಲಿ ಸಿದ್ಧಾರೂಢರು ಎಂಟು ವರ್ಷದಿಂದ ನಲವತ್ತೆಂಟು ವರ್ಷಗಳ ನಡುವೆ ನಡೆಯುವ ಮಹಿಮೆಗಳನ್ನು ತೋರಿಸಲಾಗಿದೆ. ಮಂಟೂರು, ಹೈದರಾಬಾದ್, ಕಾಶ್ಮೀರ, ಸಕಲೇಶಪುರ ಹಾಗೂ ಕರ್ನಾಟಕದ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ನಡೆಯುವಾಗ ನನಗೂ ಕೆಲವು ವಿಶೇಷ ಅನುಭವಗಳಾದವು.