ಕನ್ನಡ ಚಿತ್ರರಂಗದ ದೊಡ್ಮನೆ ದೀಪವಾಗಿ ಬೆಳಗುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ಪುನೀತ್ ರಾಜ್‍ಕುಮಾರ್ ನಿಧನದಿಂದಾಗಿ ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿದವರು, ಅವರ ಸ್ಮರಣಾರ್ಥ 'ರಾಜಕುಮಾರ' ಸಿನಿಮಾವನ್ನ ಉಚಿತವಾಗಿ ಪ್ರದರ್ಶನ ಮಾಡುತ್ತಿದ್ದಾರೆ.
ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ನಟನೆಯ 'ರಾಜಕುಮಾರ' ಸಿನಿಮಾದ ವಿಶೇಷ ಪ್ರದರ್ಶನ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಗೆ, ಅಭಿಮಾನಿಗಳಿಗಾಗಿ ಉಚಿತ ಶೋ ಆರಂಭಿಸಲಾಗಿದೆ. ರಾಜಕುಮಾರನ ಸಿನಿಮಾವನ್ನ ನೋಡಲು ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರತನಕ ಬೆಳಂಬೆಳಗ್ಗೆ ಅಭಿಮಾನಿಗಳು ಶ್ರೀನಿವಾಸ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಸಿನಿಮಾನ್ನ ನಿರ್ದೇಶನ ಮಾಡಿದ್ದರೆ, ಹೊಂಬಾಳೆ ಫಿಲ್ಮ್ ಸಂಸ್ಥೆ ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು. ದುಃಖದಲ್ಲಿಯೂ ಅಪ್ಪು ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನ ಮೆರೆದರು.
ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣದಿಂದ ರಾಜ್ಯಾದ್ಯಂತ ಸ್ಥಗಿತಗೊಂಡಿದ್ದ, ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ಪ್ರದರ್ಶನ, ಎಂದಿನಂತೆ 10 ಗಂಟೆ ಶೋ ಆರಂಭವಾಗಿದೆ. ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ರಾಜಕುಮಾರ ಸಿನಿಮಾ ಮುಗಿದ ನಂತರ 'ಭಜರಂಗಿ 2' ಸಿನಿಮಾ ಶೋ ಆರಂಭ ಆಗಲಿದೆ. ಜತೆಗೆ ರಾಜ್ಯಾದ್ಯಂತ ಮತ್ತೆ 'ಭಜರಂಗಿ 2' ಸಿನಿಮಾ ಎಂದಿನಂತೆ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ:'ಎಲ್ಲಾ ಮುಗಿದು ಹೋಯಿತು'.. ಗೆಳೆಯನಿಗೆ ಭಾವನಾತ್ಮಕ ವಿದಾಯ ಪತ್ರ ಬರೆದ ಕಿಚ್ಚ