ಕರ್ನಾಟಕ

karnataka

ETV Bharat / sitara

'ಕೋಟ್ಯಧಿಪತಿ'ಯಲ್ಲಿ ಗೆದ್ದ 18 ಲಕ್ಷ ರೂ. ಹಣವನ್ನು ಮೈಸೂರು ಶಕ್ತಿಧಾಮಕ್ಕೆ ನೀಡಿದ್ದ ಅಪ್ಪು - appu

ಕನ್ನಡದ ಕೋಟ್ಯಧಿಪತಿ ಮೊದಲ ಸರಣಿಯನ್ನು ನಟ ರಮೇಶ್​ ಅರವಿಂದ್​ ನಡೆಸಿಕೊಡುತ್ತಿದ್ದರು. ಈ ಸಂದರ್ಭ ಪುನೀತ್​ ಭಾಗವಹಿಸಿ 18 ಲಕ್ಷ ರೂ. ಹಣವನ್ನು ಗೆದ್ದಿದ್ದರು. ಈ ಹಣವನ್ನು ಅಪ್ಪು ಮೈಸೂರಿನ ಶಕ್ತಿಧಾಮಕ್ಕೆ ನೀಡಿ ಮಾನವೀಯತೆ ಮೆರೆದಿದ್ದರು.

Shakthidhama Women rehabilitation center
Shakthidhama Women rehabilitation center

By

Published : Oct 30, 2021, 9:55 AM IST

ಮೈಸೂರು:ಖಾಸಗಿ ವಾಹಿನಿಯ 'ಕನ್ನಡದ ಕೋಟ್ಯಧಿಪತಿ' ಮೊದಲ ಸರಣಿಯಲ್ಲಿ ತಾವು ಗೆದ್ದ 18 ಲಕ್ಷ ರೂ. ಹಣವನ್ನು ಮೈಸೂರಿನ ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ಧಿ ಕೇಂದ್ರಕ್ಕೆ ನೀಡಿ ಮಾನವೀಯತೆಯನ್ನು ತೋರಿದ್ದರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಮೈಸೂರು ಜಿಲ್ಲೆಗೆ ಅವರ ನಂಟಿನ ವರದಿ ಇಲ್ಲಿದೆ.

ಮೈಸೂರಿನ ಊಟಿ ರಸ್ತೆಯಲ್ಲಿರುವ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವನ್ನು ಡಾ.ರಾಜ್​​ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್1998 ರಲ್ಲಿ ಸ್ಥಾಪನೆ ಮಾಡಿ, 2000ನೇ ಇಸ್ವಿಯಿಂದ ಈ ಶಕ್ತಿಧಾಮದಲ್ಲಿ 150ಕ್ಕೂ ಹೆಚ್ಚು ಅನಾಥ ಮತ್ತು ಬಡ ಹೆಚ್ಚು ಹೆಣ್ಣು ಮಕ್ಕಳ ಪ್ರಾಥಮಿಕ ಹಂತದಿಂದ ಇಂಜಿನಿಯರಿಂಗ್ ಹಂತದವರೆಗೆ ಶಿಕ್ಷಣವನ್ನು ನೀಡಲು ಸಹಾಯ ಮಾಡುತ್ತಿದ್ದರು.

ಜೊತೆಗೆ ಸಂತ್ರಸ್ತ ಮಹಿಳೆಯರಿಗೆ ಆಶ್ರಯದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಸಹ ಈ ಸಂಸ್ಥೆ ನೀಡುತ್ತಿತ್ತು. ಈ ಶಕ್ತಿಧಾಮ ಕೇಂದ್ರಕ್ಕೆ ಈಗ ಗೀತಾ ಶಿವರಾಜ್ ಕುಮಾರ್ ಅಧ್ಯಕ್ಷರಾಗಿದ್ದಾರೆ.

ಕನ್ನಡದ ಕೋಟ್ಯಧಿಪತಿ ಮೊದಲ ಸರಣಿಯನ್ನು ನಟ ರಮೇಶ್​ ಅರವಿಂದ್​ ನಡೆಸಿಕೊಡುತ್ತಿದ್ದರು. ಈ ಸಂದರ್ಭ ಪುನೀತ್​ ಭಾಗವಹಿಸಿ 18 ಲಕ್ಷ ರೂ. ಹಣವನ್ನು ಗೆದ್ದಿದ್ದರು. ಈ ಹಣವನ್ನು ಅಪ್ಪು ಶಕ್ತಿಧಾಮಕ್ಕೆ ನೀಡಿ ಮಾನವೀಯತೆ ಮೆರೆದಿದ್ದರು. ಆದರೆ, ಈ ವಿಚಾರ ಎಲ್ಲೂ ಪ್ರಚಾರ ಆಗದಂತೆ ಹಣ ನೀಡಿ ಹೋಗಿದ್ದರು.

ಮೈಸೂರು ಶಕ್ತಿಧಾಮ

ಜೊತೆಗೆ ಡಾ.ರಾಜ್‍ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ತಮ್ಮ ಹುಟ್ಟು ಹಬ್ಬವನ್ನು ಈ ಶಕ್ತಿಧಾಮದಲ್ಲಿ ಆಚರಿಸುತ್ತಿದ್ದರು. ಮುಖ್ಯವಾಗಿ ಈ ಶಕ್ತಿಧಾಮದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದರು. ಈ ಶಕ್ತಿಧಾಮದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಊಟದ ಮನೆ ಹಾಗೂ ಗ್ರಂಥಾಲಯ ಕಟ್ಟಡಗಳ ಉದ್ಘಾಟನೆಗೆ ಆಗಮಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ವಿದ್ಯಾರ್ಥಿಗಳಿಗೆ ಅವರ ಸಾವು ನಂಬಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಜನಸಾಗರ

ಚಾಮುಂಡಿ ಭಕ್ತರಾಗಿದ್ದ ಅಪ್ಪು

ಚಾಮುಂಡಿ ತಾಯಿಯ ಪರಮಭಕ್ತರಾಗಿದ್ದ ನಟ ಪುನೀತ್ ರಾಜ್‍ಕುಮಾರ್ ಪ್ರತಿ ಆಷಾಢ ಮಾಸದಲ್ಲಿ ಬರಿಗಾಲಿನಲ್ಲೇ ಚಾಮುಂಡಿ ಬೆಟ್ಟವನ್ನು ಮೆಟ್ಟಿಲು ಮೂಲಕ ಹತ್ತಿ ದೇವಿಯ ದರ್ಶನ ಪಡೆಯುತ್ತಿದ್ದರು. ಈ ಬಾರಿಯು ಸಹ ಸೆಪ್ಟೆಂಬರ್‌ 22 ರಂದು ಮುಂಜಾನೆಯೇ ಚಾಮುಂಡಿ ಬೆಟ್ಟದ ಮೆಟ್ಟಿಲನ್ನು ಹತ್ತಿ ತಾಯಿಯ ದರ್ಶನ ಪಡೆದಿದ್ದರು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 'ಯುವರತ್ನ' ಸಿನಿಮಾ ಚಿತ್ರೀಕರಣವಾಗಿದ್ದು, ಆ ಸಂದರ್ಭದಲ್ಲಿ ತುಂಬಾ ದಿನಗಳ ಕಾಲ ಇಲ್ಲೇ ಚಿತ್ರೀಕರಣ ನಡೆಸಿದ ಪುನೀತ್ ಇಲ್ಲಿನ ವಿದ್ಯಾರ್ಥಿಗಳಿಗೆ ತುಂಬಾ ಅಚ್ಚುಮೆಚ್ಚಾಗಿದ್ದರು. ಜೊತೆಗೆ ಮೈಸೂರಿನೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದ ಅವರು, ಸಿನಿಮಾ ಚಿತ್ರೀಕರಣ ಹಾಗೂ ಚಾಮರಾಜನಗರದ ತಮ್ಮ ತಂದೆಯ ಮನೆಗೆ ಹೋಗುವಾಗ ಮೈಸೂರಿನಲ್ಲೇ ಉಳಿದುಕೊಂಡು ಹೋಗುತ್ತಿದ್ದರು. ಸರಳ ಹಾಗೂ ಮಾನವೀಯತೆಗೆ ಸಾಕ್ಷಿಯಾಗಿದ್ದ ಪುನೀತ್ ಸಾವು ನಿಜಕ್ಕೂ ಆಘಾತ ತಂದಿದೆ ಎನ್ನುತ್ತಾರೆ ಶಂಕರ್ ಅಶ್ವಥ್.

ಚಿತ್ರ ಪ್ರದರ್ಶನ ರದ್ದು

ನಟ ಪುನೀತ್ ರಾಜ್‍ಕುಮಾರ್ ನಿಧನದಿಂದ ನಿನ್ನೆಯಿಂದಲೇ ಮೈಸೂರಿನಲ್ಲಿ ಚಿತ್ರ ಪ್ರದರ್ಶನಗಳು ರದ್ದಾಗಿದ್ದು, ಕೆಲವು ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಅಂಗಡಿ ಮುಂದೆ ಪುನೀತ್ ಭಾವಚಿತ್ರವನ್ನು ಹಾಕಿ ಗೌರವ ಸೂಚಿಸುತ್ತಿದ್ದಾರೆ. ಮತ್ತೆ ಕೆಲವರು ಪುನೀತ್ ಭಾವಚಿತ್ರದ ಮುಂದೆ ಮೇಣದ ಬತ್ತಿ ಬೆಳಗಿಸಿ ಸಂತಾಪ ಸೂಚಿಸುತ್ತಿದ್ದಾರೆ.

ಇದರ ಜೊತೆಗೆ ಪಾರ್ವತಮ್ಮ ರಾಜ್‍ಕುಮಾರ್ ಅವರ ತವರೂರಾದ ಸಾಲಿಗ್ರಾಮದಲ್ಲಿ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಲಾಗುತ್ತಿದೆ. ತಾಯಿ ಪಾರ್ವತಮ್ಮ ಜೊತೆ ಸಾಲಿಗ್ರಾಮಕ್ಕೆ ಪುನೀತ್ ಬಂದಾಗಲೆಲ್ಲ ಇಲ್ಲಿನ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದರು. ಜೊತೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಸಮುದಾಯ ಭವನಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಇಂದಿನ ಚಿತ್ರ ಮಂದಿರದ ಮಾಲೀಕರು ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details