ಕರ್ನಾಟಕ

karnataka

ETV Bharat / sitara

ತಂದೆಗೆ ತಕ್ಕ ಮಗ.. ಅಪ್ಪನ ವ್ಯಕ್ತಿತ್ವ ರೂಢಿಸಿಕೊಂಡಿದ್ದ ‘ದೊಡ್ಮನೆ ಹುಡುಗ’.. ಸರಳ ವ್ಯಕ್ತಿತ್ವದ ‘ರಾಜಕುಮಾರ’..

ತಂದೆಯಂತೆಯೇ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕಥೆಗಳುಳ್ಳ ಚಿತ್ರಗಳಲ್ಲಿ ನಟಿಸಿದ್ದರು. ‘ಅರಸು’, ‘ಆಕಾಶ್’, ‘ಮಿಲನ’, ‘ ಪೃಥ್ವಿ’, ‘ಮೈತ್ರಿ’, ‘ ಪರಮಾತ್ಮ’, ‘ರಾಜಕುಮಾರ’ ಚಿತ್ರಗಳಲ್ಲಿ ಇದನ್ನು ಕಾಣಬಹುದು. ಈ ಕಾರಣಕ್ಕಾಗಿಯೇ ಪುನೀತ್ ಸಿನಿಮಾಗಳು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಎಂದು ಗುರುತಿಸಿಕೊಂಡವು..

ತಂದೆಗೆ ತಕ್ಕ ಮಗ
ತಂದೆಗೆ ತಕ್ಕ ಮಗ

By

Published : Oct 30, 2021, 3:16 PM IST

Updated : Oct 30, 2021, 3:33 PM IST

ಬೆಂಗಳೂರು :ಅಪ್ಪ-ಅಮ್ಮನನ್ನು ಕಾಣುವ ಆತುರವೋ ಏನೋ ಎಂಬಂತೆ 46ನೇ ವಯಸ್ಸಿಗೆ ಬದುಕಿನ ಪಯಣ ಮುಗಿಸಿದ ಪುನೀತ್ ರಾಜ್​ಕುಮಾರ್ ಬರೀ ಜನಪ್ರಿಯ ನಟರಷ್ಟೇ ಆಗಿರಲಿಲ್ಲ.

ಕನ್ನಡದ ಕಟ್ಟಾಳು ಕೂಡ ಆಗಿದ್ದರು. ತಂದೆಯ ವರ್ಚಸ್ಸಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಿದ್ದ ಅಪ್ಪು ವ್ಯಕ್ತಿತ್ವದಲ್ಲಿ ಅಪ್ಪನ ಹಲವು ಸಾಮ್ಯತೆಗಳನ್ನು ಕಾಣಬಹುದು.

ಅಪ್ಪನನೊಂದಿಗೆ ನಟಿಸಿ ರಾಷ್ಟ್ರಪ್ರಶಸ್ತಿ:ಹುಟ್ಟುವಾಗಲೇ ಅಪ್ಪನ ಸ್ಟಾರ್ ಗಿರಿ ಕಂಡಿದ್ದ ಪುನೀತ್, ಡಾ.ರಾಜ್ ಕುಮಾರ್ ಅವರೊಂದಿಗೆ ಶೂಟಿಂಗ್ ಸ್ಥಳಗಳಿಗೆ ಹೋಗುತ್ತಿದ್ದರು. 6 ತಿಂಗಳ ಮಗುವಾಗಿದ್ದಾಗಲೇ ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ಅಪ್ಪನೊಂದಿಗೆ ನಟಿಸಿದ್ದರು.

ನಂತರ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಾಗ್ಯವಂತ’, ‘ಭಕ್ತ ಪ್ರಹ್ಲಾದ’, ‘ಹೊಸ ಬೆಳಕು’, ‘ಸನಾದಿ ಅಪ್ಪಣ್ಣ’, ‘ವಸಂತಗೀತ’, ‘ಪರಶುರಾಮ’ ಚಿತ್ರಗಳಲ್ಲಿ ಅಪ್ಪನೊಂದಿಗೆ ನಟಿಸಿದ್ದರು.

ತಂದೆಯ ಕೆನ್ನೆಗೆ ಸಿಹಿ ಮುತ್ತು ನೀಡುತ್ತಿರುವ ಪುನೀತ್​

ಭಕ್ತ ಪ್ರಹ್ಲಾದ ಪಾತ್ರ ಹಾಗೂ ‘ಬೆಟ್ಟದ ಹೂವು’ ರಾಮುವಿನ ಪಾತ್ರ ಪುನೀತ್ ಪ್ರತಿಭೆಗೆ ಸಾಕ್ಷಿಯಾಗಿದ್ದವು. ಹೀಗಾಗಿಯೇ, ರಾಮು ಪಾತ್ರ ನಿರ್ವಹಣೆಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು.

ಅಪ್ಪನಂತೆಯೇ ಮೌಲ್ಯಾಧಾರಿತ ಚಿತ್ರಗಳ ಆಯ್ಕೆ :2002ರಲ್ಲಿ ಮತ್ತೆ ಚಿತ್ರರಂಗದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡ ಪುನೀತ್ ಚಿತ್ರಕಥೆಗಳ ಆಯ್ಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ತಂದೆಯಂತೆಯೇ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕಥೆಗಳುಳ್ಳ ಚಿತ್ರಗಳಲ್ಲಿ ನಟಿಸಿದ್ದರು. ‘ಅರಸು’, ‘ಆಕಾಶ್’, ‘ಮಿಲನ’, ‘ ಪೃಥ್ವಿ’, ‘ಮೈತ್ರಿ’, ‘ ಪರಮಾತ್ಮ’, ‘ರಾಜಕುಮಾರ’ ಚಿತ್ರಗಳಲ್ಲಿ ಇದನ್ನು ಕಾಣಬಹುದು.

ಬಾಲ್ಯದಲ್ಲೇ ಗಾಯನ ಆಸಕ್ತಿ ಹೊಂದಿದ್ದ ಅಪ್ಪು

ಈ ಕಾರಣಕ್ಕಾಗಿಯೇ ಪುನೀತ್ ಸಿನಿಮಾಗಳು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಎಂದು ಗುರುತಿಸಿಕೊಂಡವು. ತಮ್ಮ ಚಿತ್ರಗಳಲ್ಲಿ ಅಶ್ಲೀಲ ದೃಶ್ಯಕ್ಕೆ ಅವಕಾಶವಿಲ್ಲದಂತೆ ನೋಡಿಕೊಂಡಿದ್ದರು. ಪುನೀತ್ ನಟನೆ ಜತೆಗೆ ಹಾಡುವುದರಲ್ಲೂ ಸೈ ಎನ್ನಿಸಿಕೊಂಡಿದ್ದರಿಂದ ಅಭಿಮಾನಿಗಳು ಸಹಜವಾಗಿಯೇ ಮಗನಲ್ಲಿ ಅಪ್ಪನನ್ನು ಕಾಣುತ್ತಿದ್ದರು.

ಕನ್ನಡದ ಮೇಲೆ ಅಪಾರ ಪ್ರೀತಿ :ತಂದೆ ರಾಜ್ ಕುಮಾರ್ ಅವರಂತೆಯೇ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಹೀಗಾಗಿಯೇ, ಸಾಕಷ್ಟು ಅವಕಾಶಗಳ ಹೊರತಾಗಿಯೂ ಕನ್ನಡ ಹೊರತುಪಡಿಸಿ ಬೇರೆ ಭಾಷೆ ಚಿತ್ರಗಳಲ್ಲಿ ನಾಯಕನಾಗಿ ನಟಿಸಲು ನಿರಾಕರಿಸಿದರು. ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಬೇಕಾದರೆ ಡಬ್ಬಿಂಗ್ ಇರಕೂಡದು ಎಂದು ಪ್ರತಿಪಾದಿಸಿದ್ದರು.

ಕನ್ನಡ ಚಿತ್ರರಂಗವನ್ನು ಬಲಪಡಿಸಲು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದು ನಂಬಿದ್ದರು. ಅದಕ್ಕಾಗಿ ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದರು.

ಅಣ್ಣಾವ್ರೊಂದಿಗೆ ಬಾಲಕ ಪುನೀತ್​

ಸರಳ ವ್ಯಕ್ತಿತ್ವದ ‘ರಾಜಕುಮಾರ’ :ಪ್ರಜ್ಞಾಪೂರ್ವಕವಾಗಿಯೇ ಸರಳತೆ ರೂಢಿಸಿಕೊಂಡಿದ್ದ ಅಪ್ಪು, ರಾಜ್ ಕುಮಾರ್ ಅಪಹರಣ ಪ್ರಕರಣದ ಬಳಿಕ ನಡವಳಿಕೆಯಲ್ಲಿ ಬಹುದೊಡ್ಡ ಬದಲಾವಣೆಯಾಗಿತ್ತು. ತಂದೆಯ ವರ್ಚಸ್ಸಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದನ್ನು ಪ್ರಜ್ಞಾಪೂರ್ವಕವಾಗಿಯೇ ಬೆಳೆಸಿಕೊಂಡಿದ್ದರು.

ಈ ಪರಿವರ್ತನೆ ಪುನೀತ್ ಅವರನ್ನು ಸಾಮಾಜಿಕ ಬದುಕಿನಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ಯಿತು. ಡಾ.ರಾಜ್ ಕುಮಾರ್ ಅಸ್ತಂಗತರಾದ ನಂತರ ಅಭಿಮಾನಿಗಳು ಪುನೀತ್ ರಾಜ್​ಕುಮಾರ್ ಅವರಲ್ಲಿ ತಂದೆಯನ್ನು ನೋಡುತ್ತಿದ್ದರು. ಇದರಿಂದಾಗಿ ಪುನೀತ್ ಸಹಜವಾಗಿಯೇ ಮತ್ತಷ್ಟು ಸರಳ ಮತ್ತು ವಿನಯಪೂರ್ವಕ ವ್ಯಕ್ತಿಯಾದರು.

ಓದಿ:ನಾಳೆ ಪುನೀತ್ ಅಂತ್ಯಕ್ರಿಯೆ.. ಬೆಳಗಿನವರೆಗೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ

ಸಮಾಜಕ್ಕೆ ‘ಯುವರತ್ನ’ನ ಕೊಡುಗೆ ಅಪಾರ :ಪುನೀತ್ ಬಾಲ್ಯದಿಂದಲೇ ಅಪ್ಪ ಅಮ್ಮನ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಿದ್ದರು. ಹೀಗಾಗಿ, ತಮ್ಮ ಸಂಪಾದನೆಯ ಒಂದಷ್ಟು ಭಾಗವನ್ನು ವೃದ್ಧಾಶ್ರಮ, ಅನಾಥಾಶ್ರಮ, ಸರ್ಕಾರಿ ಶಾಲೆಗಳಿಗೆ ನೆರವು ನೀಡಲು ಬಳಸುತ್ತಿದ್ದರು.

ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಬಹುಪಾಲು ಸಂಭಾವನೆಯನ್ನು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿದ್ದರು.

ನಂದಿನಿ ಹಾಲಿನ ಉತ್ಪನ್ನಗಳು, ಕೃಷಿ ಇಲಾಖೆ ಜಾಹೀರಾತು ಸೇರಿದಂತೆ ಸರ್ಕಾರ ಪ್ರಕಟಿಸಿದ ಜನ ಜಾಗೃತಿ ಜಾಹೀರಾತುಗಳಿಗೆ ಸಂಭಾವನೆ ನಿರಾಕರಿಸಿದ್ದರು. ಎಡಗೈಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು ಎಂಬ ಅಪ್ಪನ ಮಾತನ್ನು ಈ ವಿಚಾರದಲ್ಲಿ ತಪ್ಪದೇ ಪಾಲಿಸುತ್ತಿದ್ದರು.

ಡಾ.ರಾಜ್ ಕುಮಾರ್ ಮತ್ತು ಪುನೀತ್

ಕುಟುಂಬಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದರು. ಪುನೀತ್ ರಾಜ್ ಕುಮಾರ್ ಸ್ಟಾರ್ ನಟನಾದರೂ ಎಂದಿಗೂ ಅದನ್ನು ತಲೆಗೆ ತುಂಬಿಕೊಳ್ಳಲಿಲ್ಲ. ಅಪ್ಪನಂತೆಯೇ ವೃತ್ತಿ ಬದುಕು ಮತ್ತು ಕುಟುಂಬ ಎರಡಕ್ಕೂ ಪ್ರಾಶಸ್ತ್ಯ ಕೊಟ್ಟವರು.

ತಮ್ಮ ಕೌಟುಂಬಿಕ ವಿಷಯಗಳನ್ನು ಬೀದಿಗೆ ತಂದು ರಂಪ ಮಾಡಿಕೊಂಡವರಲ್ಲ. ಇದು ಪುನೀತ್ ಅವರಿಗೆ ಪೋಷಕರಿಂದ ಬಂದ ಸಂಸ್ಕಾರ ಎಂಬುದರಲ್ಲಿ ಎರಡು ಮಾತಿಲ್ಲ.

ಕೋಳಿ ಸಾರು ಎಂದರೆ ಪಂಚಪ್ರಾಣ :ಪುನೀತ್ ಕೂಡ ತಂದೆಯಂತೆಯೇ ಕೋಳಿ ಸಾರು ಇಷ್ಟಪಡುತ್ತಿದ್ದರು. ಹೀಗೆ ಹಲವು ವಿಷಯಗಳಲ್ಲಿ ಡಾ.ರಾಜ್ ಕುಮಾರ್ ಅವರ ಗುಣ, ನಡವಳಿಕೆಗಳನ್ನು ಪುನೀತ್ ಅವರಲ್ಲಿಯೂ ಕಾಣಬಹುದು.

ಓದಿ:ಪುನೀತ್‌ ಪಾರ್ಥಿವ ಶರೀರ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜೂ.ಎನ್‌ಟಿಆರ್‌

Last Updated : Oct 30, 2021, 3:33 PM IST

ABOUT THE AUTHOR

...view details