ಚಾಮರಾಜನಗರ: ಹಿಂದುಳಿದ ಜಿಲ್ಲೆ ಎಂದೇ ಹಣೆಪಟ್ಟಿ ಹೊಂದಿರುವ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಪಣ ತೊಟ್ಟಿರುವ ಪುನೀತ್ ರಾಜ್ಕುಮಾರ್, ಜಿಲ್ಲೆಯ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ನಾನು ಸಂಪೂರ್ಣ ಕೈ ಜೋಡಿಸುತ್ತೇನೆ ಎಂದು ಭರವಸೆ ನೀಡಿರುವ ಪುನೀತ್, ಈಗ ಮತ್ತೊಂದು ಹೆಜ್ಜೆ ಮುಂದಿರಿಸಿದ್ದಾರೆ.
ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ವಿಡಿಯೋ ಚಿತ್ರೀಕರಣದಲ್ಲಿ ಪವರ್ ಸ್ಟಾರ್
ಚಾಮರಾಜನಗರ ಜಿಲ್ಲೆಯ ರಾಯಭಾರಿಯಾಗಿರುವ ಪುನೀತ್ ರಾಜ್ಕುಮಾರ್ ಈಗ ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅರಣ್ಯ ಇಲಾಖೆ ಚಿತ್ರೀಕರಣಕ್ಕೆ ಅನುಮತಿ ನೀಡಿದೆ ಎಂದು ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಫೋಟೋದಲ್ಲಿರುವ ಚಿಕ್ಕ ಮಕ್ಕಳು ಯಾರೆಂದು ಗುರುತಿಸುವಿರಾ?
ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದಾಗಿದ್ದು ಚಾಮರಾಜನಗರ ಕಾಡುಗಳಲ್ಲಿ ಪರಿಸರ ಉಳಿವಿಗಾಗಿ ಜಾಗೃತಿ ವಿಡಿಯೋ ಒಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪುಣಜನೂರು, ಬೂದಿಪಡಗ, ಕೆ.ಗುಡಿ ಭಾಗದ ಕಾಡುಗಳಲ್ಲಿ ನಡೆಯುವ ಚಿತ್ರೀಕರಣದಲ್ಲಿ ಇಂದು ಪುನೀತ್ ಭಾಗವಹಿಸಿದ್ದಾರೆ. ಈ ಕುರಿತು, ಚಾಮರಾಜನಗರದ ಸಿಸಿಎಫ್ ಮನೋಜ್ ಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. "ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ಚಿತ್ರೀಕರಣಕ್ಕಾಗಿ ಪುನೀತ್ ಬಂದಿದ್ದಾರೆ. ಅರಣ್ಯ ಇಲಾಖೆ ಕೂಡಾ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಇದು ರಾಜ್ಯಮಟ್ಟದ ವಿಡಿಯೋ ಆಗಿದೆ" ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ದೊಡ್ಡಗಾಜನೂರಿನ ಮನೆಗೂ ನಟ ಪುನೀತ್ ಭೇಟಿ ನೀಡಿದ್ದಾರೆ. ಈ ವೇಳೆ ಚಾಮರಾಜನಗರದ ಅರ್ಚಕ ಅನಂತ ಪ್ರಸಾದ್, ಕಸಾಪ ಜಿಲ್ಲಾಧ್ಯಕ್ಷ ವಿನಯ್ ತೆರಳಿ ಪುನೀತ್ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಿದ್ದಾರೆ.