ಕೊರೊನಾ ವೈರಸ್ನಿಂದ ಜನಜೀವನವೇ ಬದಲಾಗಿದೆ. ಎಲ್ಲಾ ಕ್ಷೇತ್ರಗಳು ಆರ್ಥಿಕ ನಷ್ಟ ಎದುರಿಸುತ್ತಿವೆ. ಈ ಬಿಸಿ ಚಿತ್ರರಂಗಕ್ಕೆ ಕೂಡಾ ತಟ್ಟಿದೆ. ಸರ್ಕಾರ ಇನ್ನೂ ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಕೂಡಾ ನೀಡಿಲ್ಲ. ಈಗಾಗಲೇ ಚಿತ್ರರಂಗಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಚಿತ್ರರಂಗ ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕು ಎನ್ನಲಾಗುತ್ತಿದೆ. ಈ ನಡುವೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ಪ್ರವೀಣ್ ಕುಮಾರ್ (ರಾಮಕೃಷ್ಣ) ಒಂದು ಮನವಿ ಮಾಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕರು, ಇತರ ಕಲಾವಿದರು ಈ ಸಂಭಾವನೆಯಲ್ಲಿ ಕಡಿಮೆ ಮಾಡಿಕೊಳ್ಳಬೇಕು. ಇದರಿಂದ ನಿರ್ಮಾಪಕರಿಗೆ ಸಹಾಯ ಆಗುತ್ತದೆ ಎನ್ನುತ್ತಿದ್ದಾರೆ.
ಬಡ್ಡಿಗೆ ಹಣ ತಂದು ಸಿನಿಮಾಗೆ ಸುರಿಯುವ ನಿರ್ಮಾಪಕರಿಗೆ ಚೇತರಿಸಿಕೊಳ್ಳಲು ಸಮಯ ಬೇಕು. ಬಡ್ಡಿಹಣ ಕಟ್ಟದೆ ವಿಧಿ ಇಲ್ಲ. ನಿರ್ಮಾಪಕರು ಬಡ್ಡಿ ಕಟ್ಟದೆ ಇದ್ದರೆ ಅವರಿಗೆ ಮರುಸಾಲ ಹುಟ್ಟುವುದಿಲ್ಲ. ಆದ್ದರಿಂದ ಸಂಭಾವನೆಯನ್ನು ಕಡಿಮೆ ಮಾಡಿಕೊಂಡು ಚಿತ್ರೋದ್ಯಮಕ್ಕೆ ಸಹಾಯ ಮಾಡಬೇಕು.
ಮತ್ತೊಂದೆಡೆ ಪ್ರದರ್ಶಕ ವಲಯ ಕೂಡಾ ಸಾಕಷ್ಟು ನಷ್ಟ ಅನುಭವಿಸಿದೆ. ಬಾಡಿಗೆ ಕಡಿಮೆ ಮಾಡಿ, ಪರ್ಸಂಟೇಜ್ ಹೆಚ್ಚು ಕೊಡಿ, ಟಿಕೆಟ್ ದರ ಇಳಿಸಿ ಎಂದು ಕೇಳಲು ಸಾಧ್ಯವಿಲ್ಲ. ಮತ್ತೊಂದೆಡೆ ಚಿತ್ರೀಕರಣ ಚಟುವಟಿಕೆಗಳು ಬಂದ್ ಆಗಿದ್ದು ಸ್ಟುಡಿಯೋ ಮಾಲೀಕರು ಕೂಡಾ ಕೈ ಚೆಲ್ಲಿ ಕುಳಿತಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಲಾವಿದರು ಮನಸ್ಸು ಮಾಡಿದರೆ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡು ಚಿತ್ರರಂಗ ಸುಧಾರಿಸಿಕೊಳ್ಳಲು ಸಹಕರಿಸಬಹುದು' ಎಂದು ಮನವಿ ಮಾಡಿದ್ದಾರೆ.
ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾಡಿರುವ ಈ ಮನವಿಗೆ ರಾಕ್ಲೈನ್ ವೆಂಕಟೇಶ್ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇವರ ಜೊತೆಗೆ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಕೂಡಾ ಈ ಮನವಿಯನ್ನು ಅರಿತು ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾರೆ.