ಕೊರೋನಾದಿಂದಾಗಿ ಕನ್ನಡ ಚಿತ್ರರಂಗ ಸಾಕಷ್ಟು ಕಷ್ಟಕ್ಕೆ ಸಿಲುಕಿತ್ತು. ಮುಖ್ಯವಾಗಿ ಚಿತ್ರಮಂದಿರಗಳಲ್ಲಿ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗಿ 10 ತಿಂಗಳೇ ಕಳೆದಿವೆ. ಈ ಮಧ್ಯೆ ಕೇಂದ್ರ ಸರ್ಕಾರ 50 ಪರ್ಸೆಂಟ್ ಸೀಟುಗಳ ಚಿತ್ರ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದರೂ ಕೆಲವು ಕಡೆ ಸಂಪೂರ್ಣವಾಗಿ ಚಿತ್ರಮಂದಿರಗಳು ತೆರೆದಿರಲಿಲ್ಲ. ಅದಕ್ಕೆ ಕಾರಣ ಚಿತ್ರ ಪ್ರದರ್ಶಕರ ಮಹಾ ಮಂಡಲದ ಅಧ್ಯಕ್ಷ ಓದು ಗೌಡ ಅವರ ನಿಲುವು.
ನಿರ್ಮಾಪಕರು ಚಿತ್ರಮಂದಿರಗಳಲ್ಲಿ ತಮ್ಮ, ಸಿನಿಮಾವನ್ನು ಪ್ರದರ್ಶಿಸಬೇಕಾದರೆ ಬಾಡಿಗೆ ಬಿಟ್ಟು ಪರ್ಸೆಂಟೇಜ್ ಲೆಕ್ಕ ಕೊಡಬೇಕು ಎನ್ನುವುದು ಮಹಾಮಂಡಲ ಅಧ್ಯಕ್ಷ ಓದುಗೌಡ ಅವರ ಬೇಡಿಕೆಯಾಗಿದೆ. ಇದನ್ನು ಚಿತ್ರಮಂದಿರಗಳ ಮಾಲೀಕರು ಕೂಡಾ ಬೆಂಬಲಿಸಿದ್ದಾರೆ. ನಿರ್ಮಾಪಕರು ಇದಕ್ಕೆ ಒಪ್ಪುವವರೆಗೂ ಚಿತ್ರಮಂದಿರವನ್ನು ತೆರೆಯಲು ಬಿಡುವುದಿಲ್ಲ ಎಂದು ಓದುಗೌಡ ಪಣ ತೊಟ್ಟಿದ್ದಾರೆ.ಇದು ಈಗ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ವಿಚಾರ ತಿಳಿದಿರುವ ಭಜರಂಗಿ 2, ಫ್ಯಾಂಟಮ್, ಯುವರತ್ನ, ಪೊಗರು, ಕೋಟಿಗೊಬ್ಬ 3 ನಂತ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಜಾಕ್ ಮಂಜು, ಕೆ.ಪಿ. ಶ್ರೀಕಾಂತ್, ಪುಷ್ಕರ್ ಮಲ್ಲಿಕಾರ್ಜುನ್, ಸುಪ್ರೀತ್, ಬಿ.ಕೆ. ಗಂಗಾಧರ್ ಸೇರಿದಂತೆ ಕೆಲ ಬಿಗ್ ಬಜೆಟ್ ನಿರ್ಮಾಪಕರು 'ಪೊಗರು' ಸಿನಿಮಾ ರಿಲೀಸ್ ಪ್ರೆಸ್ಮೀಟ್ನಲ್ಲಿ ಓದುಗೌಡ ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ.