ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಹಿನ್ನೆಲೆ ಇಂದು ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ನಿರ್ಮಾಪಕ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ನಿರ್ಮಾಪಕ ಟೇಶಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಫಿಲ್ಮ್ ಚೇಂಬರ್ನಲ್ಲಿ ಸಾ.ರಾ.ಗೋವಿಂದು ದಬ್ಬಾಳಿಕೆ: ನಿರ್ಮಾಪಕ ಟೇಶಿ ವೆಂಕಟೇಶ್ ಆರೋಪ - undefined
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಜೂನ್ 29ರಂದು ನಡೆಯಲಿದೆ. ಇನ್ನು ರಾಕ್ಲೈನ್ ವೆಂಕಟೇಶ್ ನಾಮಪತ್ರ ವಾಪಸ್ ಪಡೆದಿದ್ದು, ತುಮಕೂರು ಜೈರಾಜ್ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಚೇಂಬರ್ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ವಿರುದ್ಧ ಟೇಶಿ ವೆಂಕಟೇಶ್ ಕಿಡಿಕಾರಿದರು. ವಾಣಿಜ್ಯ ಮಂಡಳಿ ಚುನಾವಣೆ ವಿಚಾರದಲ್ಲಿ ಸಾ.ರಾ.ಗೋವಿಂದು ನಡೆ ಸರಿ ಇಲ್ಲ. ಅವರು ಹೇಳಿದಂತೆ ಎಲ್ಲರೂ ನಡೆದುಕೊಳ್ಳಬೇಕೆಂಬ ಧೋರಣೆ ಅನುಸರಿಸುತ್ತಿದ್ದಾರೆ. ವಾಣಿಜ್ಯ ಮಂಡಳಿ ಮೇಲೆ ಸಾ.ರಾ.ಗೋವಿಂದು ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಧ್ಯಕ್ಷರ ಅಧಿಕಾರಾವಧಿ ಒಂದು ವರ್ಷವಾದರೂ ಅವರು ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಯಾರೂ ಅವರ ಎದುರು ನಿಂತು ಪ್ರಶ್ನೆ ಮಾಡುವಂತಿಲ್ಲ. ಗುಂಪು ಕಟ್ಟಿಕೊಂಡು ಬಂದು ವಾಣಿಜ್ಯ ಮಂಡಳಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಎಲ್ಲರ ಮೇಲೆ ಬಲವಂತವಾಗಿ ಹೇರುತ್ತಾರೆ. ಮುಂದಿನ ವರ್ಷ ಮತ್ತೆ ಅವರೇ ಅಧ್ಯಕ್ಷರಾಗಿ ಆಯ್ಕೆ ಆಗುತ್ತೇನೆ ಎಂದು ಈಗಲೇ ನಿರ್ಧರಿಸಿದ್ದಾರೆ. ವಾಣಿಜ್ಯ ಮಂಡಲಿಯಲ್ಲಿ ಅವರು ಹಿಟ್ಲರ್ನಂತೆ ವರ್ತಿಸುತ್ತಾರೆ. ಅವರ ವಿರುದ್ಧ ಮಾತನಾಡಿದರೆ ನಮಗೆ ಅಲ್ಲಿ ಸ್ಥಾನ ಇರುವುದಿಲ್ಲ ಎಂದು ವೆಂಕಟೇಶ್ ಆರೋಪಿಸಿದರು.
ಸಾ.ರಾ.ಗೋವಿಂದು ಸೂಚಿಸಿದವರೇ ಫಿಲಂ ಚೇಂಬರ್ ಅದ್ಯಕ್ಷರಾಗುತ್ತಾರೆ. ಅಧಿಕಾರದಿಂದ ಇಳಿದ ನಂತರ ಕೂಡಾ ತಮ್ಮ ಅಧಿಪತ್ಯ ಸಾಧಿಸುತ್ತಾರೆ. ತಮ್ಮ ಪುತ್ರನನ್ನೂ ಸೆಕ್ಟರ್ ಸಮಿತಿಗೆ ಮೆಂಬರ್ ಮಾಡಿದ್ದಾರೆ. ಮೆಂಬರ್ ಅಗಿದ್ದ ವೇಳೆ ಅನೂಪ್ ಒಂದೇ ಒಂದು ಕಾರ್ಯಕಾರಿ ಸಮಿತಿ ಸಭೆಗೆ ಹಾಜರಾಗಿಲ್ಲ. ಈಗ ಕಾರ್ಯಕಾರಿ ಸಮಿತಿಗೂ ಸ್ಪರ್ಧಿಸಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಸಾ.ರಾ.ಗೋವಿಂದು ಕುಟುಂಬ ರಾಜಕೀಯ ಮಾಡುತ್ತಿದೆ. ಅವರು ತಮ್ಮ ಧೋರಣೆ ಬದಲಾಯಿಸಿಕೊಳ್ಳದಿದ್ದರೆ ಮುಂದಿನ ಎರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಶಿಸಿ ಹೋಗುತ್ತದೆ ಎಂದು ಆರೋಪಿಸಿದರು.