ಸಿಲಿಕಾನ್ ಸಿಟಿ ಬೆಂಗಳೂರು ಈಗ ಕಾಂಕ್ರೀಟ್ ಕಾಡಾಗಿ ಪರಿಣಮಿಸುತ್ತಿದೆ. ಗಿಡ-ಮರಗಳು, ತೋಟಗಳು ಮಾಯವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಚಿತ್ರರಂಗದ ಸಿನಿಮಾ ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿಕ್ಕದಾಗಿ ಚೊಕ್ಕದಾದ ಗಾರ್ಡ್ನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.
ನಾಗರಭಾವಿಯಲ್ಲಿ ತಮ್ಮ ಮನೆಯ ಕಾಂಪೌಂಡ್ ಒಳಗೆ ಹಾಗೂ ಟೆರೆಸ್ ಮೇಲೆ ಕೃಷ್ಣ ದಂಪತಿ ಸಣ್ಣ ಪ್ರಮಾಣದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತರಕಾರಿ, ಸೊಪ್ಪು, ಹಣ್ಣು ಹಾಗೂ ಹೂ ಗಿಡಗಳನ್ನು ನೆಟ್ಟು, ಪ್ರೀತಿಯಿಂದ ಜೋಪಾನ ಮಾಡುತ್ತಿದ್ದಾರೆ. ಈ ಗಿಡಗಳಿಗೆ ಸಾವಯವ ಗೊಬ್ಬರವನ್ನು ಬಳಸುತ್ತಿದ್ದಾರೆ. ನಿತ್ಯ ಬಳಕೆಯ ನೀರನ್ನೇ ರಿಸೈಕಲ್ ಮಾಡಿ ತಮ್ಮ ಗಾರ್ಡ್ನಲ್ಲಿರುವ ಕೈತೋಟಕ್ಕೆ ಬಳಸುತ್ತಾರೆ. ಮಳೆ ನೀರು ಕೋಯ್ಲು ಪದ್ದತಿ ಅಳವಡಿಸಿ ಅಂತರ್ಜಲ ವೃದ್ಧಿಗೆ ಪ್ರಾಶಸ್ತ್ಯ ನೀಡಿದ್ದಾರೆ.