ಒಂದು ಕಡೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಾಯಕ ಆಗಲು ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ನಿರ್ಮಾಪಕ ಶಶಿಧರ್ ಕೆ.ಎಂ. ನಾನೇ ನಿರ್ದೇಶನ ಮಾಡುತ್ತೇನೆ ಎಂದು ಮುಂದೆ ಬಂದಿದ್ದಾರೆ.
ದಿಶಾ ಎಂಟರ್ ಪ್ರೈಸಸ್ ಅಡಿಯಲ್ಲಿ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರವನ್ನು ಸುಮಲತಾ ಅಂಬರೀಶ್ ಹಾಗೂ ಹರಿಪ್ರಿಯಾ ಅಭಿನಯದಲ್ಲಿ ನಿರ್ಮಾಣ ಮಾಡಿದ ನಿರ್ಮಾಪಕ ಶಶಿಧರ್ ಮತ್ತೊಂದು ಸಿನಿಮಾ ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಅಭಿನಯದಲ್ಲಿ ನಿರ್ಮಿಸಲು ಸಹ ಸಜ್ಜಾಗಿದ್ದಾರೆ.
ಆದರೆ ಈ ಲಾಕ್ಡೌನ್ ಸಮಯದಲ್ಲಿ ಅವರಿಗೆ ಒಂದು ಚಿಂತನೆ ಹೊಳದಿದೆ. ಅದೇ ಡಯಾಬಿಟೀಸ್ ಕುರಿತಾದ ಕಥಾ ವಸ್ತು. ಒಂದು ಗಂಭೀರವಾದ ಕಥೆಯನ್ನು ಹಾಸ್ಯ ಲೇಪನದಲ್ಲಿ ಶಶಿಧರ್ ನಿರ್ದೇಶನ ಮಾಡಲು ಸಿದ್ಧವಾಗಿದ್ದಾರೆ. 30ರ ವಯಸ್ಸಿನಲ್ಲೇ ಈ ಸಕ್ಕರೆ ಕಾಯಿಲೆ ವಕ್ಕರಿಸಿದರೆ ಏನು ಮಾಡಬೇಕು ಎಂಬುದು ಈ ಚಿತ್ರದ ಪ್ರಮುಖ ಅಂಶ.
ಶಶಿಧರ್ ಕೆ.ಎಂ. ಈ ಹಿಂದೆ ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಅನುಭವ ಅವರನ್ನು ನಿರ್ದೇಶಕ ಪಟ್ಟ ಅಲಂಕರಿಸಲು ಧೈರ್ಯ ನೀಡಿದೆ. ಪುಷ್ಪಕ ವಿಮಾನ (ರಮೇಶ್ ಅರವಿಂದ್-ರಚಿತಾ ರಾಮ್ ಸಿನಿಮಾ) ಸಂಭಾಷಣೆ ಬರೆದ ಗುರುಪ್ರಸಾದ್ ಈ ಚಿತ್ರಕ್ಕೆ ಸಂಭಾಷಣೆ ಒದಗಿಸುತ್ತಿದ್ದಾರೆ. ರಾಮ ರಾಮ ರೇ ಸಿನಿಮಾ ಛಾಯಾಗ್ರಹಣ ಮಾಡಿದ ಲವಿತ್ ಈ ಚಿತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಲಿದ್ದಾರೆ.
ಸಂಗೀತ ನಿರ್ದೇಶಕ, ಇನ್ನಿತರ ತಂತ್ರಜ್ಞರ ಪಟ್ಟಿ ಹಾಗೂ ಕಲಾವಿದರ ಆಯ್ಕೆ ಪ್ರಕ್ರಿಯಲ್ಲಿ ನಿರ್ಮಾಪಕ ಕೆ.ಎಂ. ಶಶಿಧರ್ ಇದ್ದಾರೆ.