ಕರ್ನಾಟಕ

karnataka

ETV Bharat / sitara

ಅದೊಂದು ಸಿನಿಮಾ ಪ್ರೊಡ್ಯೂಸ್​ ಮಾಡಬೇಕಿತ್ತು.. ನನಸಾಗಲಿಲ್ಲ ನಿರ್ಮಾಪಕಿ ಜಯಶ್ರೀ ದೇವಿ ಕನಸು...

ಕನ್ನಡದ ಚಿತ್ರ ನಿರ್ಮಾಪಕಿ, ವಿತರಕಿ ಜಯಶ್ರೀದೇವಿ ನಿನ್ನೆ ಮುಂಜಾನೆ ನಿಧನರಾದರು. ಇವರು ಪಕ್ಕದ ಆಂಧ್ರ ಪ್ರದೇಶದಿಂದ ಬಂದು ಕನ್ನಡ ಚಿತ್ರ ರಂಗದಲ್ಲಿ ದೊಡ್ಡ ನಿರ್ಮಾಪಕಿಯಾಗಿ ಜನಪ್ರಿಯಗೊಂಡವರು. ಕನ್ನಡದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಪ್ರೊಡ್ಯೂಸ್​ ಮಾಡಿರುವ ಜಯಶ್ರೀದೇವಿಯ ಒಂದು ಕನಸು ನನಸಾಗಲೇ ಇಲ್ಲ.

ನನಸಾಗಲಿಲ್ಲ ನಿರ್ಮಾಪಕಿ ಜಯಶ್ರೀ ದೇವಿ ಕನಸು...

By

Published : Feb 14, 2019, 12:31 PM IST

ಹೌದು, ಜಯಶ್ರೀದೇವಿ ಅವರು ‘ಇಂದಿರಾ ಗಾಂಧಿ’ ಕುರಿತು ಸಿನಿಮಾ ಮಾಡಬೇಕು ಎನ್ನುವ ಕನಸು ಕಂಡಿದ್ದರು. ನಾನು ಒಬ್ಬ ಮಹಿಳೆಯಾಗಿ ಅತ್ಯಂತ ಗೌರವಪೂರ್ವಕವಾಗಿ 'ಇಂದಿರಾ ಗಾಂಧಿ ಅವರನ್ನು ಗಮನಿಸಿದ್ದೇನೆ, ನನಗೆ ಅವರ ರಾಜಕೀಯ ಜೀವನಕ್ಕಿಂತ ಮಿಗಿಲಾದ ವಯಕ್ತಿಕ ಜೀವನ ಬಹಳ ಕುತೂಹಲ ಎಂದು ಜಯಶ್ರೀ ದೇವಿ ಹೇಳಿಕೊಂಡು, ಅದಕ್ಕೆ ಒಂದು ಸ್ಕ್ರಿಪ್ಟ್ ಸಹ ತಾವೇ ತಯಾರಿಸಿದ್ದರು. ಎನ್ಎಫ್​​ಡಿಸಿ ಜೊತೆ ಜಂಟಿಯಾಗಿ ನಿರ್ಮಾಣ ಮಾಡಬೇಕು ಅಂತಲೂ ತೀರ್ಮಾನಿಸಿದ್ದರು. ಆದರೆ, ಅದು ಕೈಗೂಡಲೆ ಇಲ್ಲ.

ದಿವಂಗತ ಜಯಶ್ರೀ ದಿಟ್ಟ ಮಹಿಳೆ ಎಂಬುದರಲ್ಲಿ ಅನುಮಾನ ಬೇಕಿಲ್ಲ. ಬರಹಗಾರ್ತಿಯಾಗಿ ಹೈದರಾಬಾದಿನಿಂದ ಬಂದು ‘ಕೋಣ ಇದೈತೆ’ ಎಂಬ ವಿನೂತನ ಕಥಾವಸ್ತುವಿನಿಂದ ಅವರು ಬಹಳಷ್ಟು ಜನರನ್ನು ಎದುರು ಹಾಕಿಕೊಂಡಿದ್ದರು. ನ್ಯಾಯಾಲಯವನ್ನು ನಿಂದಿಸುವ ವಿಚಾರಗಳು ಆ ಸಿನಿಮಾದಲ್ಲಿದ್ದಾಗ ಸೆನ್ಸಾರ್ ಸಹ ಅವರಿಗೆ ಅಷ್ಟು ಸುಲಭವಾಗಿ ದೊರಕಲಿಲ್ಲ. ಆಮೇಲೆ ಮತ್ತೆ ಕರ್ನಾಟಕ ಸರ್ಕಾರದ ನೀತಿಯನ್ನು ಅವರ ಎರಡನೇ ನಿರ್ದೇಶನ ‘ಭವಾನಿ’ ಚಿತ್ರದಲ್ಲಿ ಖಂಡಿಸಿದರು. ಒಂದು ಕಡೆ ಸರ್ಕಾರ ಸರಾಯಿಗೆಗೆ ಲೈಸೆನ್ಸ್ ಕೊಡುತ್ತೇ ಮತ್ತೊಂದು ಕಡೆ ಕುಡಿಯುವುದು ತಪ್ಪು ಎಂದು ಹೇಳುವ ನೀತಿಯನ್ನು ಒಬ್ಬ ಮಹಿಳೆ ಅನುಭವಿಸುವ ಯಾತನೆಯನ್ನು ಜಯಶ್ರೀ ದೇವಿ ನಿರ್ದೇಶಿಸಿದ್ದರು. ಅದು ಐದು ಪ್ರಶಸ್ತಿಗಳನ್ನು ಬಾಚಿಕೊಂಡಿತು.

ನನಸಾಗಲಿಲ್ಲ ನಿರ್ಮಾಪಕಿ ಜಯಶ್ರೀ ದೇವಿ ಕನಸು...

ಆ ಎರಡು ಸಿನಿಮಾಗಳ ನಿರ್ದೇಶನ ಅಷ್ಟೇ. ಆಮೇಲೆ ಅವರು ನಿರ್ಮಾಪಕಿಯಾಗಿ ‘ಅಮೃತ ವರ್ಷಿಣಿ’ ಸಿನಿಮಾದಿಂದ ಹೆಸರು ಹಾಗೂ ಹಣ ಮಾಡಿದರು. ಕನ್ನಡ ಚಿತ್ರಗಳು ಬೇರೆ ರಾಜ್ಯಗಳಿಗೆ ಹೋಗೋಲ್ಲ, ಇಲ್ಲಿಯ ಪ್ರತಿಭೆ ಇಲ್ಲಿಯೇ ಸಾಗುತ್ತಿದೆ. ಅದನ್ನು ಪಕ್ಕದ ರಾಜ್ಯಗಳಿಗೆ ಪರಿಚಯಿಸಬೇಕು ಎಂದು 1995 ರಲ್ಲಿ ಯೋಚಿಸಿ, ಕನ್ನಡ ಸಿನಿಮಾ ಬೆಂಗಳೂರು ಅಂತ ಮಾರುಕಟ್ಟೆಯಲ್ಲಿ ಐದು ಭಾಷೆಗಳ ನಡುವೆ ಪೈಪೋಟಿಯಲ್ಲಿ ಗೆದ್ದು ಬರುವುದು ಇದೆಯಲ್ಲ ಅದೇ ಗ್ರೇಟ್ ಎಂದು ಹಲವು ಪರಭಾಷಿಕರಿಗೆ ಹೇಳಿದ್ದರು.

ಜಯಶ್ರೀ ದೇವಿ ಅದಕ್ಕಾಗೇ ಹೆಚ್ಚು ಹಣ ಹಾಗೂ ಮಲ್ಟಿ ಸ್ಟಾರ್ ಸಿನಿಮಾಗಳ ಬಗ್ಗೆಯೂ ಕಣ್ಣು ಹಾಯಿಸಿದರು. ‘ಹಬ್ಬ’ ಅಂತಹ ಸಿನಿಮಾದಲ್ಲಿ ಡಾ.ವಿಷ್ಣು, ಡಾ.ಅಂಬರೀಶ್, ದೇವರಾಜ್, ಶಶಿಕುಮಾರ್, ರಾಮ್​ಕುಮಾರ್, ಜಯಪ್ರದಾ, ಕಸ್ತೂರಿ...ಹಾಗೂ ಇನ್ನಿತರ ನಟರುಗಳನ್ನು ಒಟ್ಟಿಗೆ ತಂದರು. ಆಮೇಲೆ ‘ವಂದೇ ಮಾತರಂ’ ಸಿನಿಮಾದಲ್ಲಿ ಡಾ.ಅಂಬರೀಶ್, ವಿಜಯಶಾಂತಿ ಹಾಗೂ ಕನ್ನಡ ಸೆಕಂಡ್ ಲೈನ್ ನಾಯಕರುಗಳನ್ನು ಒಟ್ಟುಗೂಡಿಸಿದರು. ನಮ್ಮೂರ ಮಂದಾರ ಹೂವೆ ಅಂತಹ ಸಿನಿಮಾದಲ್ಲಿ ಮೊದಲ ಬಾರಿಗೆ ಶಿವರಾಜಕುಮಾರ್ ಹಾಗೂ ರಮೇಶ್ ಅರವಿಂದ್ ಜೊತೆ ಪ್ರೇಮ ಅವರನ್ನು ಸೇರಿಸಿ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ದೊಡ್ಡ ಜಯಭೇರಿ ಹೊಡೆದರು. ಮತ್ತೆ ‘ಸ್ನೇಹ ಲೋಕ’ ಅಂತಹ ಸಿನಿಮಾದಲ್ಲಿ ರಮೇಶ್ ಅರವಿಂದ್, ಶಶಿಕುಮಾರ್, ರಾಮ್ ಕುಮಾರ್, ಅನು ಪ್ರಭಾಕರ್ ಅವರನ್ನು ತೆರೆಯ ಮೇಲೆ ತಂದರು. ಆ ಸಿನಿಮಾದ ‘ಒಂದೇ ಉಸಿರಂತೆ ನಾನು ನೀನು....ಬ್ರೆತ್ ಲೆಸ್ ಹಾಡು ಅಂದಿಗು, ಇಂದಿಗೂ ಜನಪ್ರಿಯತೆ ಇಟ್ಟುಕೊಂಡಿದೆ.

ನಾನು ಕನ್ನಡ ಚಿತ್ರರಂಗದಲ್ಲೇ ಸಿನಿಮಾ ಮಾಡುವುದು ಸರಿಯಾದ ನಿರ್ಧಾರ ಜಯಶ್ರೀ ದೇವಿ ಅವರಿಗೆ ಇನ್ನಷ್ಟು ಗಟ್ಟಿಯಾದದ್ದು, ಅತ್ಯಂತ ಹಿರಿಯ ತೆಲುಗು ಸಿನಿಮಾಗಳ ನಿರ್ದೇಶಕ ಕೆ.ರಾಘವೇಂದ್ರ ರಾವ್ ಅವರನ್ನು ಕನ್ನಡಕ್ಕೆ ಕರತಂದು ‘ಶ್ರೀ ಮಂಜುನಾಥ’ ಸಿನಿಮಾ ಇಂದ ಮತ್ತೊಮ್ಮೆ ಮಲ್ಟಿ ಸ್ಟಾರ್ ಸಿನಿಮಾ ಕನ್ನಡ ಅಲ್ಲದೆ ತೆಲುಗು ಸಿನಿಮಾದಲ್ಲಿ ತಯಾರಿಸಿದರು. ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಈಶ್ವರನ ಪಾತ್ರಕ್ಕೆ ಮನಒಲಿಸಿದರು. ಹಂಸಲೇಖ ಅವರ ಸಂಗೀತ ಸಹ ಹಿಟ್ ಆಯಿತು.

ನನಸಾಗಲಿಲ್ಲ ನಿರ್ಮಾಪಕಿ ಜಯಶ್ರೀ ದೇವಿ ಕನಸು...

ಸದಾ ಹುಮ್ಮಸ್ಸು, ವೇಗ, ದೊಡ್ಡ ಯೋಚನೆಗಳಿಗೆ ಜಯಶ್ರೀ ದೇವಿ ಅವರಿಗೆ ಪೆಟ್ಟು ಬಿದ್ದದ್ದು ಇದೆ. ಕೆಲವು ಸಿನಿಮಾಗಳ ಸೋಲಿನಿಂದ ತತ್ತರಿಸಿದ್ದರು. ಕಳೆದ ವರ್ಷ ಅವರ ಮೇಲೆ ಅರ್ರೆಸ್ಟ್ ವಾರಂಟ್ ಬಂದದ್ದು ಅವರ ಮನಸಿಗೆ ನೋವು ತಂದಿತು. 2005 ರಲ್ಲಿ ಮಾಡಿದ ಸಾಲ 17.5 ಲಕ್ಷ ಬೃಹದಾಕಾರವಾಗಿ 54 ಲಕ್ಷ ಆಗಿತ್ತು.

ಮತ್ತೆ ‘ಮುಕುಂದ ಮುರಾರಿ’ ಸಿನಿಮಾಕ್ಕೆ ಜಂಟಿ ನಿರ್ಮಾಪಕಿ ಆಗಿ ಹಿಂದಿಯ ‘ಒ ಮೈ ಗಾಡ್’ ಸಿನಿಮಾದ ಹಕ್ಕು ತಂದು, ನಿರ್ಮಾಪಕ ಕುಮಾರ್ ಜೊತೆ ಸೇರಿ ಚಿತ್ರ ತಯಾರಿಸಿದರು. ಇಲ್ಲಿಯೂ ಜಯಶ್ರೀ ದೇವಿ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರನ್ನು ಜೊತೆ ಮಾಡಿದರು. ಅಷ್ಟು ಹೊತ್ತಿಗಾಗಲೇ ಅವರಿಗೆ ಹೃದಯದ ಖಾಯಿಲೆ ಶುರು ಆಗಿತ್ತು.

ಸದಾ ಕೆಲಸದಲ್ಲಿ, ವ್ಯವಹಾರದಲ್ಲಿ ಅವರು ತೊಡಗಿಸಿಕೊಂಡ ಒತ್ತಡ ಅವರಿಗೆ ಜಾಸ್ತಿಯೇ ಆಗಿತ್ತು. ತಾವು ಸದಾ ಕಾಲ ನಂಬಿದ ಜೆ.ಕೆ ಭಾರವಿ ಜೊತೆ ಮತ್ತೆ ಮುನಿರತ್ನ ಕುರುಕ್ಷೇತ್ರ ರಾಮೋಜೀ ರಾವ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಾಗ ಉಸ್ತುವಾರಿ ಹೊತ್ತುಕೊಂಡರು. ಕಳೆದ ತಿಂಗಳು ತೆಲುಗು ನಟ ಎನ್​​.ಟಿ.ಆರ್ ಬಯೋಪಿಕ್ ‘ಕಥಾ ನಾಯಕುಡು’ ಸಮಯದಲ್ಲಿ ಹುರುಪಿನಿಂದ ಓಡಾಡಿಕೊಂಡಿದರು ಜಯಶ್ರೀ ದೇವಿ.

ಜಯಶ್ರೀ ದೇವಿ ನಿರ್ಮಿಸಿದ ಇನ್ನಿತರ ಸಿನಿಮಾಗಳು ಅಂದರೆ ಗಡಿ ಬಿಡಿ ಕೃಷ್ಣ (ಶಿವರಾಜಾಕುಮಾರ್), ಸುವ್ವಿ ಸುವ್ವಲಾಲಿ, ಪ್ರೇಮ ರಾಗ ಹಾಡು ಗೆಳತಿ, ನಿಶ್ಯಬ್ದ, ಬಂಗಾರದ ಮನೆ, ದೇವರು ವರವನು ಕೊಟ್ರೆ ಚಿತ್ರಗಳು.

ಕನ್ನಡ ಚಿತ್ರರಂಗಕ್ಕೆ ಇಷ್ಟೆಲ್ಲ ದುಡಿದ ಜಯಶ್ರೀ ದೇವಿ ಬುಧವಾರ ಮುಂಜಾನೆ ಹೃದಯಾಘಾತದಿಂದ ಜೀನವ ಪಯಣಕ್ಕೆ ಮುಗಿಸಿದ್ರು. ಜಯಶ್ರೀ ದೇವಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕನ್ನಡ ಚಿತ್ರರಂಗ ಪ್ರಾರ್ಥಿಸುತ್ತಿದೆ.

ABOUT THE AUTHOR

...view details