ದರ್ಶನ್ ಅಭಿನಯದ ಮುಂದಿನ ಚಿತ್ರ ಯಾವುದು ಎಂಬುದರ ಬಗ್ಗೆ ಗೊಂದಲ ಇದ್ದೇ ಇದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಗೋಲ್ಡ್ ರಿಂಗ್ ಎಂಬ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದಿತ್ತು. ಆದರೆ ಆ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ.
ಹೀಗಿರುವಾಗಲೇ ಜೋಗಿ ಖ್ಯಾತಿಯ ಪ್ರೇಮ್ ಸೋಮವಾರ ಒಂದು ಟ್ವೀಟ್ ಮಾಡಿದ್ದರು. ದರ್ಶನ್ ಜೊತೆಗೆ ಚಿತ್ರ ಮಾಡುತ್ತಿರುವುದಾಗಿಯೂ, ಸದ್ಯದಲ್ಲೇ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ಹೆಚ್ಚಿನ ವಿವರಗಳಿಗೆ ರಾಕ್ಲೈನ್ ಎಂಟರ್ಟೈನ್ಮೆಂಟ್ ಟ್ವಿಟರ್ ಹ್ಯಾಂಡಲ್ ಗಮನಿಸುತ್ತಿರಿ ಎಂದು ಹೇಳಿದ್ದರು. ಈ ವಿಷಯವನ್ನು ಕೇಳಿ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ, ಅದೊಂದು ಫೇಕ್ ನ್ಯೂಸ್ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಪ್ರೇಮ್ ಪತ್ನಿ ರಕ್ಷಿತಾ ಪ್ರೇಮ್ ಇದೊಂದು ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿದ್ದಾರೆ.