ಅಂಗಳದಲ್ಲಿ ಅಭಿಮಾನಿಗಳ ಕೂಗು, ಬ್ಯಾಟ್, ಬಾಲ್, ಸಿಕ್ಸರ್ಗಳ ಸುರಿಮಳೆ. ಇದರೆಲ್ಲದರಿಂದ ಹೊರಬಂದಿರುವ ಪ್ರವೀಣ್ ಶ್ರೀ ಈಗ ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಚಿಕ್ಕಂದಿನಿಂದ ಪ್ರವೀಣ್ ಅವರ ಕನಸು ಇದ್ದದ್ದು ಕ್ರಿಕೆಟರ್ ಆಗಬೇಕು ಎಂದು. ಆದರೆ ಕ್ರಿಕೆಟ್‍ನಲ್ಲಿ ಅಂತಾರಾಷ್ಟ್ರೀಯ ಪಂದ್ಯ, ಇಲ್ಲದಿದ್ದರೆ ಐಪಿಎಲ್ ಆಡಿದರಷ್ಟೇ ಭವಿಷ್ಯ ಇದೆ. ಪ್ರವೀಣ್ ಅಂತಾರಾಷ್ಟ್ರೀಯ ಪಂದ್ಯ ಆಡದಿದ್ದರೂ ಕ್ರಿಕೆಟ್ ಲೋಕದಲ್ಲಿ ಕಡಿಮೆ ಛಾಪು ಮೂಡಿಸಿಲ್ಲ. ಕರ್ನಾಟಕದ ಅಂಡರ್ 19, ಅಂಡರ್ 22 ಹಾಗೂ ರೈಲ್ವೇಸ್ ತಂಡಗಳಲ್ಲಿ ಆಡಿದ್ದಾರೆ. ಕ್ಲಬ್ವೊಂದಕ್ಕೆ ಆಡುವಾಗ ಅವರು ಹೊಡೆದಿದ್ದ 188 ರನ್‍ಗಳ ಇನಿಂಗ್ಸ್ ಈಗಲೂ ಅವರ ಸಾಧನೆಗಲ್ಲೊಂದು. ಕೆಪಿಎಲ್, ಕೆಸಿಸಿನಲ್ಲೂ ಆಡಿ ಮಿಂಚಿದ್ದಾರೆ.
"ನಾನು ಸುದೀಪ್ ಅಣ್ಣ ಅವರ ಅಭಿಮಾನಿ. ಅವರನ್ನೇ ನನ್ನ ರೋಲ್ ಮಾಡೆಲ್ ಎಂದು ನಂಬುತ್ತೇನೆ. ಅವರ ಅಭಿನಯ ನೋಡಿ ನನಗೂ ನಟನೆಯಲ್ಲಿ ಆಸಕ್ತಿ ಬೆಳೆಯಿತು. ಕಳೆದ 5-6 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಸಾಧಿಸಬೇಕು ಎಂದು ಅವಕಾಶದ ಹುಡುಕಾಟದಲ್ಲಿದ್ದೆ. ಕ್ರಿಕೆಟ್ ಆಡುವಾಗ ನನಗೆ ಯಾರೂ ಬೆಂಬಲಿಗರು ಇರಲಿಲ್ಲ. "ಡಿಯರ್ ಕಣ್ಮಣಿ"ಗೆ ಆಡಿಷನ್ ಕೊಟ್ಟ ನಂತರ ವಿಸ್ಮಯ ಗೌಡ ಅವರು ನನಗೆ ಬೆಂಬಲ ಕೊಟ್ಟರು. ಮೊದಲೇ ಸ್ನೇಹಿತರಾಗಿದ್ದರು. ಆದರೆ ಅವರ ತಂಡದ ಉತ್ಸಾಹ, ಸಿನಿಮಾದ ಕಥೆ, ನನಗೆ ಸಿಕ್ಕ ಪಾತ್ರ, ಅದರಲ್ಲೂ ಮೊದಲ ಸಿನಿಮಾದಲ್ಲೇ ಹೀರೋ ರೋಲ್, ಇದೆಲ್ಲಾ ನೋಡಿ ನಾನು ನಿಜಕ್ಕೂ ಕನಸು ಕಾಣಲು ಆರಂಭಿಸಿದೆ" ಎಂದರು ಪ್ರವೀಣ್.
ಕ್ರಿಕೆಟ್‍ನಲ್ಲೂ ನಾನು ಸಾಕಷ್ಟು ಬೆವರು ಹರಿಸಿದ್ದೆ. ಅದೇ ರೀತಿ ಸಿನಿಮಾಕ್ಕಾಗಿ ಕೂಡ ನಾನು ಶ್ರಮಹಾಕಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಗೆದ್ದೇ ಗೆಲ್ಲುತ್ತೇನೆ ಅನ್ನುವ ಭರವಸೆ ನನಗಿದೆ ಎನ್ನುತ್ತಾರೆ.
ಕ್ರಿಕೆಟ್ನಿಂದ ಸಿನಿಮಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಪ್ರವೀಣ್ ಅವರ ಪಾತ್ರದ ಬಗ್ಗೆ ಸಿನಿಮಾ ತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆಟಗಾರನಿಂದ ನಟನಾಗಲಿರುವ ಪ್ರವೀಣ್ ಅವರಿಗೆ ವಿಸ್ಮಯ ಅವರಿಂದ ಧ್ವನಿ, ನಟನೆ, ಲುಕ್ ಎಲ್ಲಾ ರೀತಿಯಲ್ಲೂ ತರಬೇತಿಯನ್ನು ನೀಡಲಾಗುತ್ತಿದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ತೆರೆ ಮೇಲೂ ಅದು ಹಾಗೇ ಕಾಣಬೇಕಾದರೆ ತರಬೇತಿ ಬೇಕು ಎನ್ನುವುದು ವಿಸ್ಮಯ ಮಾತು.