ಕೊರೊನಾದಿಂದ ಕಷ್ಟಪಡುತ್ತಿರುವ ಜನರಿಗೆ ಇದುವರೆಗೂ ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿದುಬಂದಿದೆ. ಸರ್ಕಾರ, ಸೆಲಬ್ರಿಟಿಗಳು, ಸಂಘಸಂಸ್ಥೆಗಳು, ಸಾಮಾನ್ಯ ಜನರೂ ಕೂಡಾ ಜನರಿಗೆ ತಮ್ಮದೇ ಆದ ರೀತಿಯಲ್ಲಿ ನೆರವು ನೀಡುತ್ತಾ ಬಂದಿದ್ದಾರೆ.
ಕಷ್ಟದಲ್ಲಿರುವವರಿಗೆ ಹಗಲು, ರಾತ್ರಿ ಎನ್ನದೆ ಸಹಾಯ ಮಾಡುತ್ತಿರುವ ನಟ ಪ್ರಥಮ್ - ಬಡವರಿಗೆ ಸಹಾಯ ಮಾಡುತ್ತಿರುವ ಪ್ರಥಮ್
ಬಿಗ್ಬಾಸ್ ಮಾಜಿ ಸ್ಪರ್ಧಿ, ನಟ ಪ್ರಥಮ್ ಲಾಕ್ಡೌನ್ ಆರಂಭವಾದಾಗಿನಿಂದ ಬಡಜನರ ನೆರವಿಗೆ ನಿಂತಿದ್ದಾರೆ. ಇಂದು ಕೂಡಾ ಶಾಸಕ ಸಾ.ರಾ. ಮಹೇಶ್ ಅವರ ಸಹಯೋಗದಲ್ಲಿ ನಿರ್ಗತಿಕರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.
![ಕಷ್ಟದಲ್ಲಿರುವವರಿಗೆ ಹಗಲು, ರಾತ್ರಿ ಎನ್ನದೆ ಸಹಾಯ ಮಾಡುತ್ತಿರುವ ನಟ ಪ್ರಥಮ್ Pratham](https://etvbharatimages.akamaized.net/etvbharat/prod-images/768-512-7100850-671-7100850-1588862606878.jpg)
ಬಿಗ್ಬಾಸ್ ಖ್ಯಾತಿಯ ಪ್ರಥಮ್ ಕೂಡಾ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸಿದ್ದಾರೆ. ಈಗಾಗಲೇ ಚಿತ್ರರಂಗದ ಪಿಆರ್ಓ, ಮೇಕಪ್ ಮ್ಯಾನ್ಗಳಿಗೆ, ಮಂಗಳಮುಖಿಯರಿಗೆ, ನಿರ್ಗತಿಕರು ಸೇರಿದಂತೆ ಪ್ರಥಮ್ ಬಹಳಷ್ಟು ಜನರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಹಂಚಿ ಮಾನವೀಯತೆ ಮೆರೆದಿದ್ದಾರೆ. ಲಾಕ್ಡೌನ್ ಆರಂಭವಾದಾಗಿನಿಂದ ಇಂದಿಗೂ ಅವರ ಸೇವೆ ಮುಂದುವರೆದಿದ್ದು ಇಂದು ಕೂಡಾ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಊಟ ಹಂಚಿದ್ದಾರೆ.
'ನಟ ಭಯಂಕರ' ಪ್ರಥಮ್, ಶಾಸಕ ಸಾ.ರಾ. ಮಹೇಶ್ ಅವರ ಸಹಯೋಗದೊಂದಿಗೆ ನೂರಾರು ಕುಟುಂಬಗಳಿಗೆ ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಹಾಗೂ ತರಕಾರಿ ನೀಡಿದ್ದಾರೆ. ಲಾಕ್ಡೌನ್ ನೆಪ ಹೇಳಿ ಮನೆಯಲ್ಲಿ ಕೂರದೆ ಕೊರೊನಾಗೆ ಸೆಡ್ಡು ಹೊಡೆದಿರುವ ಪ್ರಥಮ್ ಹಗಲು, ಇರುಳು ಎನ್ನದೆ ಪ್ರತಿದಿನ ಜನರ ಸಹಾಯಕ್ಕೆ ಇಳಿದಿದ್ಧಾರೆ. ಇದುವರೆಗೂ ಏನಿಲ್ಲವೆಂದರೂ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿಗೆ ಸಹಾಯ ಮಾಡಿದ್ದಾರೆ ಈ ಒಳ್ಳೆ ಹುಡುಗ.