ನಟ ಶ್ರೀಮುರುಳಿಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡಿದವರು ಪ್ರಶಾಂತ್ ನೀಲ್. ಹಲವು ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ಮುರುಳಿ ಅವರಿಗೆ 'ಉಗ್ರಂ' ಎಂಬ ಸೂಪರ್ ಹಿಟ್ ನೀಡಿ, ಅವರನ್ನು ಮತ್ತೊಮ್ಮೆ ಮಿಂಚುವಂತೆ ಮಾಡಿದ್ದು, ಇದೇ ಪ್ರಶಾಂತ್ ನೀಲ್. ಇದೀಗ 'ಕೆಜಿಎಫ್ - ಚಾಪ್ಟರ್ 2' ನ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಇದೀಗ ಮತ್ತೊಮ್ಮೆ ಮುರುಳಿಯ ಜೊತೆಯಾಗುತ್ತಿದ್ದಾರೆ.
ಶ್ರೀಮುರುಳಿ ಅಭಿನಯದ 'ಮದಗಜ' ಚಿತ್ರದ ಫಸ್ಟ್ಲುಕ್ ಟೀಸರ್ ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಈಗ ಟೀಸರ್ ಬಿಡುಗಡೆಯಾಗುವುದಕ್ಕೆ ಪ್ರಶಾಂತ್ ನೀಲ್ ಒಪ್ಪಿಕೊಂಡಿದ್ದಾರೆ. ಡಿಸೆಂಬರ್ 17 ರ ಬೆಳಗ್ಗೆ 09 ಗಂಟೆ 09 ನಿಮಿಷಕ್ಕೆ ಸರಿಯಾಗಿ, ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಪ್ರಶಾಂತ್ ನೀಲ್ 'ಮದಗಜ' ಚಿತ್ರದ ಫಸ್ಟ್ಲುಕ್ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಹಾಗಂತ ಖುದ್ದು ನಿರ್ದೇಶಕ ಮಹೇಶ್ ಗೌಡ ಅವರೇ ತಿಳಿಸಿದ್ದಾರೆ.