ಪ್ರಮೋದ್ ಶೆಟ್ಟಿ, ಪೋಷಕ ನಟನಾಗಿ, ಹಾಸ್ಯನಟನಾಗಿ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದ. ಪ್ರಮೋದ್ ಶೆಟ್ಟಿ 'ಲಾಫಿಂಗ್ ಬುದ್ಧ' ಎಂಬ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ತಿಳಿದ ವಿಚಾರ. ನಿನ್ನೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
ನಿನ್ನೆ ಪ್ರಮೋದ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ 'ಲಾಫಿಂಗ್ ಬುದ್ಧ' ಚಿತ್ರದ ಪೋಸ್ಟರನ್ನು ರಿಷಭ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಈ ವರ್ಷದ ಮಾರ್ಚ್ನಲ್ಲಿ ಬಿಡುಗಡೆಯಾದ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಒಂದು ಶಿಕಾರಿಯ ಕಥೆ' ಚಿತ್ರದಲ್ಲಿ ಅವರು ಬಹಳ ಗಂಭೀರವಾದ ಪಾತ್ರ ಮಾಡಿದ್ದರು. ಆದರೆ 'ಲಾಫಿಂಗ್ ಬುದ್ಧ'ದಲ್ಲಿ ಪ್ರಮೋದ್ ಎಲ್ಲರನ್ನೂ ನಕ್ಕು ನಲಿಸಲು ಬರುತ್ತಿದ್ದಾರೆ.
ಈ ಚಿತ್ರದಲ್ಲಿ ಪ್ರಮೋದ್ ಹೆಡ್ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ. ಪತ್ನಿ ಮಾಡಿ ಬಡಿಸುವ ರುಚಿ ರುಚಿಯಾದ ಅಡುಗೆ ತಿನ್ನುವ ನಾಯಕ ದಢೂತಿ ದೇಹ ಬೆಳೆಸಿಕೊಂಡಿರುತ್ತಾನೆ. ಇಷ್ಟು ದೊಡ್ಡ ದೇಹ ಇಟ್ಟುಕೊಂಡು ಹೇಗೆ ಪೊಲೀಸ್ ಕೆಲಸ ಮಾಡುತ್ತಾನೆ...? ದಢೂತಿ ದೇಹದಿಂದ ಆತನಿಗೆ ಉಂಟಾಗುವ ಸಮಸ್ಯೆಗಳೇನು...?ಆ ಸಮಸ್ಯೆಯಿಂದ ಹೇಗೆ ಹೊರ ಬರುತ್ತಾನೆ ಎಂಬುದೇ ಚಿತ್ರದ ಕಥೆ.
ಎಂ. ಭರತ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಿಷಭ್ ಶೆಟ್ಟಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ರಿಷಭ್ ಶೆಟ್ಟಿ , ವಿಕಾಸ್ ಹಾಗೂ ಶ್ರೀಕಾಂತ್ ಜೊತೆ ಸೇರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ದೀಪಕ್ ಛಾಯಾಗ್ರಹಣವಿದೆ. ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ. ಒಟ್ಟಿನಲ್ಲಿ ಪೋಸ್ಟರ್ ಕುತೂಹಲ ಕೆರಳಿಸಿದ್ದು ಚಿತ್ರ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.