ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಏಪ್ರಿಲ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾದ ಪ್ರಚಾರಕ್ಕಾಗಿ ಇಂದಿನಿಂದ ಮೂರು ದಿನಗಳ ಕಾಲ ಚಿತ್ರತಂಡ ಉತ್ತರ ಕರ್ನಾಟಕದ ಊರೂರು ಸುತ್ತಲಿದೆ.
'ಯುವಸಂಭ್ರಮ'ಕ್ಕಾಗಿ ಉತ್ತರ ಕರ್ನಾಟಕಕ್ಕೆ ಹೊರಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಧನಂಜಯ್, ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ ಚಿತ್ರತಂಡ ಈಗಾಗಲೇ ವಿಮಾನದ ಮೂಲಕ ಕಲಬುರಗಿಗೆ ತೆರಳಿದ್ದು, ಅಲ್ಲಿನ ಏಷಿಯನ್ ಮಾಲ್ ಪಕ್ಕ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಇದಾದ ನಂತರ ಮಧ್ಯಾಹ್ನ ಒಂದಕ್ಕೆ ಬೆಳಗಾವಿಯ ಇನಾಕ್ಸ್ ಚಂದನ್ ಪಾರ್ಕಿಂಗ್‍ನಲ್ಲಿ ಅಭಿಮಾನಿಗಳೊಂದಿಗೆ ಚಿತ್ರದ ಬಗ್ಗೆ ಮಾತನಾಡಲಿದ್ದಾರೆ. ಸಂಜೆ 4.30ಕ್ಕೆ ಹುಬ್ಬಳ್ಳಿಯ ಅರ್ಬನ್ ಒಯಾಸಿಸ್ ಮಾಲ್‍ಗೆ ಭೇಟಿ ಕೊಡಲಿದ್ದಾರೆ.
ಮಾರ್ಚ್ 22ರಂದು ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನ ಅಭಿಮಾನಿಗಳನ್ನು ಭೇಟಿ ಮಾಡಲಿರುವ ಚಿತ್ರತಂಡ, ಮಂಗಳವಾರ ಮೈಸೂರು ಮತ್ತು ಮಂಡ್ಯಕ್ಕೆ ಹೋಗಲಿದ್ದಾರೆ. ಇದು ಮೊದಲ ಹಂತವಾಗಿದ್ದು, ಎರಡನೇ ಹಂತದ ಪ್ಲಾನ್ ಇನ್ನಷ್ಟೇ ಹೊರಬೀಳಬೇಕಿದೆ.
ಈ ಮಧ್ಯೆ ಯುವರತ್ನ ಚಿತ್ರದ ಟ್ರೇಲರ್ ಶನಿವಾರ ಮಧ್ಯಾಹ್ನ ಬಿಡುಗಡೆಯಾಗಿದ್ದು, ಐದು ಲಕ್ಷ ವೀಕ್ಷಣೆ ಪಡೆದಿದೆ. ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದ್ದು, ಈ ಸಿನಿಮಾ ಸಹ ದೊಡ್ಡ ಓಪನಿಂಗ್ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಸಂತೋಷ್ ಆನಂದರಾಮ್ ಬರೆದು ನಿರ್ದೇಶಿಸುತ್ತಿರುವ ಯುವರತ್ನ ಸಿನಿಮಾದಲ್ಲಿ ಪುನೀತ್ ಜೊತೆಗೆ ಧನಂಜಯ್, ಪ್ರಕಾಶ್ ರೈ, ಅವಿನಾಶ್, ರಂಗಾಯಣ ರಘು ಸೇರಿದಂತೆ ಹಲವರು ಅಭಿನಯಿಸಿದ್ದಾರೆ.