ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಹುಟ್ಟಿದ ದಿನ ಇಂದು. ರಾಜ್ಯಾದ್ಯಂತ ಅಭಿಮಾನಿಗಳು ಡಾ. ವಿಷ್ಣುವರ್ಧನ್ 70ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನು 11 ವರ್ಷಗಳ ಬಳಿಕ ವಿಷ್ಣು ಸ್ಮಾರಕ ನಿರ್ಮಾಣದ ಕಾರ್ಯ ಕೂಡಾ ಮೈಸೂರಿನಲ್ಲಿ ಆರಂಭವಾಗಿದೆ.
ಸಂಜೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಡಾ. ವಿಷ್ಣುವರ್ಧನ್ ಅವರ 70ನೇ ಜನ್ಮದಿನದ ಅಂಗವಾಗಿ ಪೋಸ್ಟಲ್ ಕವರ್ ಬಿಡುಗಡೆ ಮಾಡಲಾಗುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿ ಡಾ. ವಿಷ್ಣುವರ್ಧನ್ ಅವರಿಗೆ ಸಲ್ಲುತ್ತಿರುವ ಗೌರವವಾಗಿದೆ. ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಪ್ರಯತ್ನದಿಂದ ಮಧ್ಯಾಹ್ನ 3 ಕ್ಕೆ ವಿಧಾನ ಸೌಧದ ಎದುರಿನ ಕೇಂದ್ರ ಅಂಚೆ ಇಲಾಖೆಯಲ್ಲಿ ಈ ಲಕೋಟೆ ಬಿಡುಗಡೆ ಆಗಲಿದೆ. ಈ ಸಮಾರಂಭಕ್ಕೆ ಜೋಗಿ ಪ್ರೇಮ್, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಭಾಗವಹಿಸಲಿದ್ದಾರೆ.
ಡಾ. ವಿಷ್ಣುವರ್ಧನ್ ಕಾಮನ್ ಡಿಪಿ ಇನ್ನು ರಾಜ್ಯಾದ್ಯಂತ ಈ ದಿನ ಡಾ. ವಿಷ್ಣುವರ್ಧನ್ 70ನೇ ಜನ್ಮದಿನವನ್ನು ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತಿದೆ. ಕಿಚ್ಚ ಸುದೀಪ್ ಡಾ. ವಿಷ್ಣುವರ್ಧನ್ ಅವರ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದರು. ಸ್ಯಾಂಡಲ್ವುಡ್ ಗಣ್ಯರು ಯಜಮಾನನ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾ ಮುಖಾಂತರ ಶುಭ ಕೋರಿದ್ದಾರೆ. ಸುದೀಪ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಪುರೋಹಿತ್, ನಿರ್ದೇಶಕ ರವಿ ಶ್ರೀವತ್ಸ, ಪ್ರಣಿತಾ ಸುಭಾಷ್, ಡಾಲಿ ಧನಂಜಯ್ ಹಾಗೂ ಇನ್ನಿತರರು ಡಾ. ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
18 ಸೆಪ್ಟೆಂಬರ್ 1950 ರಂದು ಮೈಸೂರಿನಲ್ಲಿ ಜನಿಸಿದ ಸಂಪತ್ಕುಮಾರ್ 'ವಂಶವೃಕ್ಷ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ಆದರೆ ಮೊದಲು ಬಿಡುಗಡೆಯಾಗಿದ್ದು 'ನಾಗರಹಾವು'. ಈ ಚಿತ್ರದ ಮೂಲಕ ವಿಷ್ಣುವರ್ಧನನಾಗಿ ಬದಲಾದ ಅಭಿನಯ ಭಾರ್ಗವ, ಇಂದು ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ. ಸಿನಿಮಾಗಳಿಂದ ಹೆಚ್ಚಾಗಿ ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರನ್ನು ಸೆಳೆಯುತ್ತಿದ್ದ ಡಾ. ವಿಷ್ಣುವರ್ಧನ್ 30 ಡಿಸೆಂಬರ್ 2009 ರಲ್ಲಿ ಮೈಸೂರಿನಲ್ಲೇ ನಿಧನರಾದರು.
ಡಾ. ವಿಷ್ಣುವರ್ಧನ್ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರು ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈಟಿವಿ ಭಾರತದ ವತಿಯಿಂದ ಡಾ. ವಿಷ್ಣುವರ್ಧನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.