ಲಾಸ್ ಏಂಜಲೀಸ್:ಕೊರೊನಾದಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕಾಗಿರುವುದರಿಂದ ಹಾಲಿವುಡ್ ಸಿನಿಮಾಗಳ ಲಿಪ್ಲಾಕ್ ಸೀನ್ಗಳಿಗೆ ಬಹಳಷ್ಟು ತೊಂದರೆಯಾಗಿದೆ.
ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾಮಾನ್ಯ ಆಗುವುದರಿಂದ ಹಾಲಿವುಡ್ ಸ್ಟುಡಿಯೋಗಳು ಸಿಜಿಐ (ಗ್ರಾಫಿಕ್ಸ್ ದೃಶ್ಯಾವಳಿ) ಬಳಸಿ ಲಿಪ್ಲಾಕ್ನಂತಹ ಸೀನ್ಗಳನ್ನು ಸೃಷ್ಟಿಸಲು ಯೋಜಿಸುತ್ತಿವೆ.
ಹಾಲಿವುಡ್ನಲ್ಲಿ ತೀರ ಸನಿಹದ ಲಿಪ್ಲಾಕ್ ದೃಶ್ಯಾವಳಿಗಳನ್ನು ಶೂಟ್ ಮಾಡಿದ ನಂತರ ಗ್ರಾಫಿಕ್ ಎಡಿಟಿಂಗ್ ಮಾಡಲಾಗುತ್ತಿದೆ. ಕೆಲವು ಸ್ಟುಡಿಯೋಗಳು ಸಿಜಿಐ ಬಳಸಿ ಕಿಸ್ಸಿಂಗ್ ದೃಶ್ಯಗಳನ್ನು ನಿಭಾಯಿಸುವ ಯೋಜನೆ ಹಾಕಿಕೊಂಡಿದ್ದರೆ ಮತ್ತೆ ಕೆಲವರು ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.
ಉದ್ಯಮದ ವರದಿಗಳ ಪ್ರಕಾರ ತಾರಾಗಣದಲ್ಲಿರುವವರು ಮತ್ತು ಸಿಬ್ಬಂದಿಯನ್ನು ನಿತ್ಯ ಕೊರೊನಾ ವೈರಸ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೈ ತೊಳೆಯುವ ಬಗ್ಗೆ ಟ್ಯುಟೋರಿಯಲ್ ನೀಡಲಾಗುತ್ತದೆ. ಚಲನಚಿತ್ರ ಸಂಪಾದಕರ ವ್ಯಾಪಾರ ಸಂಘದಿಂದ 22 ಪುಟಗಳ ಮಾರ್ಗಸೂಚಿ ರಚಿಸಲಾಗಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರು ಜೂನ್ 12ರಿಂದ ಚಿತ್ರೀಕರಣ ಮರುಆರಂಭಕ್ಕೆ ಹಸಿರು ನಿಶಾನೆ ನೀಡಲಿದ್ದಾರೆ ಎನ್ನಲಾಗುತ್ತಿದೆ.