ಬೆಂಗಳೂರು:ಪಕ್ಕದ ಮನೆಯ ಮನೆಕೆಲಸದವಳಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ ಹಾಗೂ ಮಗ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಕುಟುಂಬಸಮೇತ ನಾಪತ್ತೆಯಾಗಿದ್ದಾರೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಜಾಮೀನುರಹಿತ ಪ್ರಕರಣ ದಾಖಲಿಸಿರುವ ಪೊಲೀಸರು ಸೌಂದರ್ಯ ಜಗದೀಶ್ ಪತ್ನಿ ರೇಖಾ, ಮಗ ಸ್ನೇಹಿತ್ಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದಾರೆ. ಹಲ್ಲೆ ಸಂಬಂಧ ನಿಮ್ಮ ವಿರುದ್ಧ ದೂರು ದಾಖಲಾಗಿದೆ. ದೂರಿನ ಬಗ್ಗೆ ವಿವರಣೆ ನೀಡುವಂತೆ ಸೌಂದರ್ಯ ಜಗದೀಶ್ ಮನೆಗೆ ನೋಟಿಸ್ ನೀಡಿ, ಮೊಬೈಲ್ ಮೂಲಕ ವಿಚಾರ ತಿಳಿಸಿದ್ದಾರೆ. ಅಲ್ಲದೆ ಪೊಲೀಸರು ದೂರುದಾರರ ಮನೆಯ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಹಲ್ಲೆ ನಡೆದ ಸ್ಥಳ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು, ಹಲ್ಲೆಗೆ ಒಳಗಾದವರಿಂದ ಮಾಹಿತಿ ಪಡೆದಿದ್ದಾರೆ.
ಪ್ರಕರಣವೇನು?
ಮನೆಕೆಲಸ ಮಾಡುವ ಮಹಿಳೆ ಅನುರಾಧ ನೀಡಿದ ದೂರಿನ ಮೇರೆಗೆ ರೇಖಾ ಜಗದೀಶ್, ಮಗ ಸ್ನೇಹಿತ್, ಮನೆಯ ಬೌನ್ಸರ್ಗಳಾದ ನಿಖಿಲ್, ಕುಮಾರ್, ರೋಹಿತ್ ಹಾಗೂ ಅಶೋಕ್ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಸೌಂದರ್ಯ ಜಗದೀಶ್ ಮನೆಯ ಪಕ್ಕದ ಮನೆಯೊಂದರಲ್ಲಿ ಅನುರಾಧ, ಕಳೆದ ಎರಡು ವರ್ಷಗಳಿಂದ ಮನೆ ಕೆಲಸ ಮಾಡಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಕಸ ಗುಡಿಸುವ ವಿಚಾರಕ್ಕಾಗಿ ಸ್ನೇಹಿತ್ ಹಾಗೂ ಆತನ ಸ್ನೇಹಿತರು ಗಲಾಟೆ ತೆಗೆದಿದ್ದಾರೆ. ಆಗ ಅನುರಾಧ ಮತ್ತು ಸ್ನೇಹಿತ್ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ.