ಕೊಚ್ಚಿ: ಮಲಯಾಳಂ ನಟಿ ಶಮ್ನಾ ಕಾಸಿಮ್ ಅವರನ್ನು ಕಿಡ್ನಾಪ್ ಮಾಡಲು ಪ್ಲ್ಯಾನ್ ಮಾಡಿದ್ದಲ್ಲದೆ ಅವರಿಂದ ಹಣ ದೋಚಲು ಯತ್ನಿಸಿದ 8 ದುಷ್ಕರ್ಮಿಗಳನ್ನು ಕೇರಳ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ಧಾರೆ. ತಲೆಮರೆಸಿಕೊಂಡ 4 ಮಂದಿ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.
ಮಲಯಾಳಂ ನಟಿ ಶಮ್ನಾ ತಮಿಳು, ತೆಲುಗು, ಕನ್ನಡ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹೆಸರು ಮಾಡಿದ್ಧಾರೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಶಮ್ನಾಗೆ ಪರಿಚಯವಾದ ವ್ಯಕ್ತಿಯೊಬ್ಬ ತಾನೊಬ್ಬ ದೊಡ್ಡ ಉದ್ಯಮಿ. ನನಗೆ ವಿದೇಶಗಳಲ್ಲಿ ಕೂಡಾ ಬುಸ್ನೆಸ್ಗಳಿವೆ ಎಂದು ನಂಬಿಸಿದ್ದಾನೆ. ಇದೇ ರೀತಿ ಮಾತನಾಡುತ್ತಾ ಶಮ್ನಾ ಅವರಿಗೆ ಹತ್ತಿರವಾಗಿದ್ದಲ್ಲದೆ ಆಕೆಗೆ ಮದುವೆ ಪ್ರಪೋಸ್ ಕೂಡಾ ಮಾಡಿದ್ದಾನೆ. ಅಷ್ಟೇ ಅಲ್ಲ, ಅವರ ಮನೆಗೆ ತೆರಳಿ ಶಮ್ನಾ ತಂದೆ-ತಾಯಿಯೊಂದಿಗೆ ಕೂಡಾ ಮಾತನಾಡಿದ್ದಾನೆ.
ಶಮ್ನಾ ಮನೆಯವರೊಂದಿಗೆ ನಯವಾಗಿ ಮಾತನಾಡಿ ಆ ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಾಗ ಶಮ್ನಾ ಮನೆಯವರಿಗೆ ಅನುಮಾನ ಶುರುವಾಗಿದೆ. ಇದಾದ ನಂತರ ಶಮ್ನಾ ಆ ವ್ಯಕ್ತಿಯನ್ನು ಅವಾಯ್ಡ್ ಮಾಡಲು ಯತ್ನಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆತ, ಶಮ್ನಾಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದಲ್ಲದೆ, ಹಣ ನೀಡದಿದ್ದರೆ ನಿನ್ನ ಕರಿಯರ್ ನಾಶ ಮಾಡುವುದಾಗಿ ಕೂಡಾ ಬೆದರಿಕೆ ಇಟ್ಟಿದ್ದಾನೆ. ಈ ಬಗ್ಗೆ ಶಮ್ನಾ ಹಾಗೂ ಪೋಷಕರು ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ಧಾರೆ. ಆದರೆ ನಾಲ್ಕು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕೊಚ್ಚಿ ಪೊಲೀಸ್ ಕಮಿಷನರ್ ವಿಜಯ್ ಸಖಾರೆ ಹೇಳುವ ಪ್ರಕಾರ, '12 ಜನರ ಗುಂಪು ಶಮ್ನಾ ಅವರನ್ನು ಮದುವೆ ಹೆಸರಿನಲ್ಲಿ ವಂಚಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಇವರೆಲ್ಲಾ ನಟಿಯನ್ನು ಕಿಡ್ನಾಪ್ ಮಾಡಲು ಕೂಡಾ ಪ್ಲ್ಯಾನ್ ಮಾಡಿದ್ದರು ಎಂಬ ವಿಚಾರವನ್ನು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಜಾಲದಲ್ಲಿ ಶಮ್ನಾ ಮಾತ್ರವಲ್ಲ ಕೆಲವೊಂದು ಮಾಡೆಲ್ಗಳನ್ನು ಕೂಡಾ ಈ ಗುಂಪು ಇದೇ ರೀತಿ ಪರಿಚಯ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮಾಡೆಲ್ಗಳನ್ನು ಪರಿಚಯ ಮಾಡಿಕೊಂಡು ಹಣ ಸುಲಿಗೆ ಮಾಡಿದ ನಂತರ ಶಮ್ನಾರಂಥ ನಟಿಯ ಬಳಿ ಹಣ ಕೀಳಲು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ನಾವು ಸಿನಿಮಾವನ್ನು ನಿರ್ಮಿಸುವುದಾಗಿ ಕೂಡಾ ಈ ಪಾಪಿಗಳು ನಂಬಿಸಿದ್ದರು ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಪಾಲಕ್ಕಾಡ್ನಲ್ಲಿ ಈ 12 ಜನರ ಗುಂಪು 8 ಮಾಡೆಲ್ಗಳನ್ನು ಕಿಡ್ನಾಪ್ ಮಾಡಿ ಅವರಿಂದ ಹಣ ಸುಲಿಗೆ ಮಾಡಿದ್ದರು' ಎನ್ನಲಾಗಿದೆ.
ಇದೀಗ ಪೊಲೀಸರು ಶಮ್ನಾ ಹಾಗೂ ಮಾಡೆಲ್ಗಳು ನೀಡಿದ ದೂರಿನ ಮೇರೆಗೆ ಆರೋಪಿಗಳ ಮೇಲೆ 7 ಕೇಸ್ಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಹಾಸ್ಯನಟರೊಬ್ಬರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ರಕರಣದಲ್ಲಿ ಸಿನಿಮಾ ನಟರ ಯಾವುದೇ ಪಾತ್ರ ಇಲ್ಲ ಎಂಬುದು ಕೂಡಾ ಸಾಬೀತಾಗಿದೆ.
ಶಮ್ನಾಗೆ ಪೂರ್ಣ ಎಂಬ ಹೆಸರು ಕೂಡಾ ಇದ್ದು ಕನ್ನಡದಲ್ಲಿ ಜೋಷ್, 100, ಸುವರ್ಣ ಸುಂದರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಸ್ಟಾರ್ ನಟಿಯೊಬ್ಬರು ಈ ರೀತಿ ಮೋಸಕ್ಕೆ ಒಳಗಾಗಿರುವುದು ನಿಜಕ್ಕೂ ವಿಪರ್ಯಾಸ.