'ಪೆದ್ರೊ' ಸಿನಿಮಾ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಟ್ರೈಲರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ನಾನು ಪೆದ್ರೊ ಚಿತ್ರ ನೋಡಿ ಬೆರಗಾದೆ. ಇತ್ತೀಚೆಗೆ ದೂರವಾಗಿರುವ ಸಿನಿಮಾ ಭಾಷೆಯನ್ನು ಈ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ವಿಭಿನ್ನವಾಗಿ ಕನ್ನಡ ಸಿನಿಮಾಗಳನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ಕನ್ನಡದಲ್ಲಿ ತಿಥಿ ಹಾಗೂ ಹರಿಕಥಾ ಪ್ರಸಂಗ ಚಿತ್ರಗಳು ನನಗೆ ಬಹಳ ಹಿಡಿಸಿದ್ದವು. ಈಗ ಆ ಸಾಲಿಗೆ ಪೆದ್ರೊ ಸೇರಿದೆ. ರಿಷಭ್ ಶೆಟ್ಟಿ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹಾರೈಸಿದರು.
ನಿರ್ಮಾಪಕ ರಿಷಭ್ ಶೆಟ್ಟಿ ಮಾತನಾಡಿ, 'ನನ್ನ ಪ್ರಕಾರ ಕಮರ್ಷಿಯಲ್ ಸಿನಿಮಾ ಅಥವಾ ಅವಾರ್ಡ್ ಸಿನಿಮಾ ಎಂಬುದು ಇಲ್ಲ. ಸಿನಿಮಾ ಅಂದರೆ ಸಿನಿಮಾ ಅಷ್ಟೇ. ವಿಭಾಗಗಳನ್ನು ನಾವು ಮಾಡಿಕೊಂಡಿದ್ದೇವೆ. ನಾನು ಇಷ್ಟ ಪಡುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಬಹಳ ಸಂತೋಷವಾಗಿದೆ. ಅವರ ಮಾರ್ಗದರ್ಶನ ನಮಗೆ ಮುಖ್ಯ. ನಟೇಶ್ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ತಂದೆ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಮಗ ತಂದೆಯನ್ನು ಚಿತ್ರರಂಗಕ್ಕೆ ಪ್ರವೇಶ ಮಾಡಿಸಿದ್ದಾರೆ. ನಟೇಶ್ ಹೆಗಡೆ ಅವರ ತಂದೆ ಗೋಪಾಲ್ ಹೆಗಡೆ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ರಾಮಕೃಷ್ಣ ಭಟ್, ಮೇಧಿನಿ ಕೆಳಮನೆ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಈ ಚಿತ್ರವನ್ನು ತೆರೆಗೆ ತರುತ್ತೇವೆ' ಎಂದು ತಿಳಿಸಿದರು.