ಕನ್ನಡ ಚಿತ್ರರಂಗದಲ್ಲಿ ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ನಿರ್ಮಾಣಕ್ಕೆ ಕೈ ಹಾಕಿರೋದು ಗೊತ್ತಿರುವ ವಿಚಾರ.
'ಒಡೆಯರ್ ಮೂವಿಸ್' ಎನ್ನುವ ನಿರ್ಮಾಣ ಸಂಸ್ಥೆಯಡಿ 'ಡೊಳ್ಳು' ಚಿತ್ರವನ್ನ ನಿರ್ಮಾಣ ಮಾಡಿದ್ದು, ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಸಾಗರ್ ಪುರಾಣಿಕ್ ಕಥೆ ಹಾಗೂ ನಿರ್ದೇಶನ ಈ ಸಿನಿಮಾಕ್ಕಿದೆ. ಡೊಳ್ಳು 2020ರಲ್ಲಿ CBFC ಇಂದ U ಸರ್ಟಿಫಿಕೇಟ್ ಪಡೆದಿದ್ದು, ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ.
ಅಮೆರಿಕದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್ನಲ್ಲಿ ಡೊಳ್ಳು ಮೊದಲ ಪ್ರದರ್ಶನ ಕಂಡು, ಎಲ್ಲ ಪ್ರೇಕ್ಷಕರ ಗಮನ ಸೆಳೆದು ಎಲ್ಲರ ಪ್ರಶಂಸೆ ಪಡೆದಿದೆ. ಡೊಳ್ಳು, ಹೀಗೆ ಇನ್ನೂ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ. ಢಾಕಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್ಗಳಲ್ಲಿ ಈಗಾಗಲೇ ಆಯ್ಕೆಯಾಗಿದೆ. ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಎಂಬ ಒಂದು ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ, ಸರಸ್ವತಿ ಪಿಂಪ್ಳೆ ಫೌಂಡೇಶನ್ನಿಂದ ದಾದಾ ಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಎಂಬ ಪ್ರಶಸ್ತಿ ಡೊಳ್ಳುಗೆ ದೊರಕಿದೆ.