ಕನ್ನಡ ಚಿತ್ರ ನಿರ್ದೇಶಕ ಪವನ್ ಕುಮಾರ್ ಅವರು ಕನ್ನಡದ ಮೊದಲ ಕ್ರೌಡ್ ಫಂಡಿಂಗ್ ಸಿನಿಮಾ ‘ಲೂಸಿಯ’ ಮಾಡಿದಾಗ ಅನುಸರಿಸಿದ ಪದ್ಧತಿಯನ್ನು ಕೊರೊನಾ ವೈರಸ್ನಿಂದ ಲಾಕ್ ಡೌನ್ ಆದ ಸಂದರ್ಭದಲ್ಲಿ ಕಾರ್ಮಿಕ ಸಹಾಯ ನೀಡಲು ಪ್ರಯೋಗಿಸಿ ಯಶ ಕಂಡಿದ್ದಾರೆ.
‘ಲೂಸಿಯ’ ಚಿತ್ರ ಮಾಡಿದಾಗ 1,400ಕ್ಕೂ ಹೆಚ್ಚು ಜನರು ವಿಶ್ವದ ನಾನಾ ಕಡೆಯಿಂದ ಚಿತ್ರಕ್ಕೆ ತಮ್ಮ ಕೈಲಾದ ಧನಸಹಾಯ ನೀಡಿದ್ದರು. ಅದನ್ನು ಜೋಪಾನ ಮಾಡಿ ಒಬ್ಬ ಬುದ್ದಿವಂತ ಲೆಕ್ಕ ಪತ್ರ ಬರೆಯುವವನನ್ನು ನೇಮಿಸಿ, ಬಂದ ಹಣವನ್ನು ಅವರು ಸರಿಯಾಗಿ ವಿನಿಯೋಗಿಸಿದ್ದರು. ಚಿತ್ರ ತೆರೆ ಕಂಡು ಸೂಪರ್ ಹಿಟ್ ಆದ್ಮೇಲೆ 1,400 ಮಂದಿ ನೀಡಿದ ಹಣವನ್ನು ಅವರು ಹಿಂತಿರುಗಿಸಿದ್ದರು.
ಈಗ ಅದೇ ಬುದ್ದಿವಂತ ನಿರ್ದೇಶಕ ಮತ್ತು ನಟ ಪವನ್ ಕುಮಾರ್ ಕ್ರೌಡ್ ಫಂಡಿಂಗ್ ನೀತಿಯನ್ನು ಮತ್ತೆ ಅನುಸರಿಸಿ 8 ಲಕ್ಷದ ಒಂದು ಸಾವಿರದ 257 ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಅದನ್ನು ತಲಾ 2000 ರೂಪಾಯಿಯಂತೆ 401 ದಿನಗೂಲಿ ಕಾರ್ಮಿಕರಿಗೆ ಹಂಚಿದ್ದಾರೆ. ಈ ವಿಚಾರವನ್ನು ಅವರು ಫೇಸ್‌ಬುಕ್ ಮೂಲಕ ತಿಳಿಸಿದ್ದಾರೆ.