ಕನ್ನಡ ಚಿತ್ರರಂಗಕ್ಕೆ ಅನೇಕ ಮಲಯಾಳಂ ಭಾಷೆಯ ನಟಿಯರು ಬಂದು ಜನಪ್ರಿಯತೆ ಸಹ ಪಡೆದುಕೊಂಡಿದ್ದಾರೆ. ಸದ್ಯ ಟಿಕ್ಟಾಕ್ನಲ್ಲಿ ಜನಪ್ರಿಯತೆ ಪಡೆದಿರುವ ನೃತ್ಯಗಾತಿ ಮಲೆಯಾಳಿ ಕುಟ್ಟಿ ಪಾರ್ವತಿ ಸದ್ಯ ಮರಿ ಟೈಗರ್ ವಿನೋದ್ ಪ್ರಭಾಕರ್ ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ.
2007 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ಪಾರ್ವತಿ ಮೆನನ್ ‘ಮಿಲನ’ ಸಿನಿಮಾದಲ್ಲಿ ಅಭಿನಯಿಸಿ ಆ ಚಿತ್ರ ಒಂದು ವರ್ಷದವರೆಗೂ ಪಿವಿಆರ್ ಪರದೆಯಲ್ಲಿ ಪ್ರದರ್ಶನ ಕಂಡಿತ್ತು. ಆನಂತರ ಮಳೆ ಬರಲಿ ಮಂಜು ಇರಲಿ, ಪೃಥ್ವಿ ಹಾಗೂ ಅಂದರ್ ಬಾಹರ್ ಕನ್ನಡ ಸಿನಿಮಾಗಳಲ್ಲೂ ನಟಿಸಿ ಪಾರ್ವತಿ ಪ್ರಶಂಸೆ ಗಿಟ್ಟಿಸಿಕೊಂಡಿದ್ರು.
ಹಾಗೆಯೇ, 2013 ರಲ್ಲಿ ಪಾರ್ವತಿ ನಾಯರ್ ಎಂಬ ಮತ್ತೊಬ್ಬ ಮಲ್ಲು ಬೆಡಗಿ ‘ಸ್ಟೋರಿ ಕಥೆ’ ಚಿತ್ರದಲ್ಲಿ ಕಾಣಿಸಿಕೊಂಡು ಆಮೇಲೆ ಕನ್ನಡದಲ್ಲಿ ‘ವಾಸ್ಕೋಡಗಾಮ’ ಚಿತ್ರದಲ್ಲೂ ನಾಯಕಿ ಆಗಿದ್ದರು.
ಈಗ ಮೂರನೇ ಪಾರ್ವತಿ ಹೆಸರಿನ ನಾಯಕಿ ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಪಾರ್ವತಿ ಅರುಣ್. ಈ ಪಾರ್ವತಿ ಮಲಯಾಳಂ ಭಾಷೆಯಲ್ಲಿ ಪೋಷಕನಟಿ ಪಾತ್ರ ನಿರ್ವಹಿಸಿದವರು. ಹಾಗೆ ನೋಡಿದರೆ ಪಾರ್ವತಿ ಅರುಣ್ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕಳೆದ ವರ್ಷ ಬಿಡುಗಡೆ ಆಗಿದ್ದ ‘ಗೀತಾ’ ಸಿನಿಮಾದಲ್ಲೂ ನಟಿಸಿದ್ದು, ಅದು ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಆದ್ರೆ, ಸಿನಿಮಾದಲ್ಲಿ ನಾಯಕಿಯಾಗಿರಲಿಲ್ಲ.
ಸದ್ಯ ಪಾರ್ವತಿ ಅರುಣ್ ಆಯ್ಕೆ ಆಗಿರುವುದು ಮರಿ ಟೈಗರ್ ವಿನೋದ್ ಪ್ರಭಾಕರ್ ಸಿನಿಮಾಕ್ಕೆ. ಇದು ಆ್ಯಕ್ಷನ್ ಹಾಗೂ ಥ್ರಿಲ್ಲರ್ ಕಥಾ ವಸ್ತು ಹೊಂದಿದ್ದು, ‘ಲಂಕಾಸುರ’ ಎಂದು ತಾತ್ಕಾಲಿಕವಾಗಿ ನಾಮಕರಣ ಮಾಡಲಾಗಿದೆ. ಈ ಚಿತ್ರದ ಫೋಟೋ ಶೂಟ್ ಸಹ ನಡೆಸಲಾಗಿದೆ. ಲಾಕ್ ಡೌನ್ ಮುಗಿದ ನಂತರ ‘ಮೂರ್ಕಾಲ್ ಎಸ್ಟೇಟ್’ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಮೋದ್ ಕುಮಾರ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.