ಕಾರವಾರ: ಪಹರೆ ಹೆಸರಿನ ಸಂಘಟನೆ ಕಳೆದ 6 ವರ್ಷಗಳಿಂದ ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯ ಮಾಡುತ್ತಾ ಬರುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಆಂದೋಲನಕ್ಕೆ ಕರೆ ನೀಡಿದ ನಂತರ ಪ್ರೇರೇಪಣೆಗೊಂಡ ಕೆಲವರು ನಗರದಲ್ಲಿ ಪಹರೆ ಅನ್ನುವ ಸಂಘಟನೆ ಕಟ್ಟಿಕೊಂಡು ಸ್ವಚ್ಛತಾ ಕಾರ್ಯ ನಡೆಸುತ್ತಾ ಬಂದಿದ್ದಾರೆ. ಪ್ರತಿ ಶನಿವಾರದಂತೆ ನಗರದ ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಕಡಲ ತೀರ, ಪಾರ್ಕ್ ಸೇರಿದಂತೆ ಹಲವೆಡೆ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಗಮನ ಸೆಳೆದ ಪಹರೆ ವೇದಿಕೆ ಇಂದಿಗೆ 317ನೇ ವಾರ ಪೂರೈಸಿದೆ.
ಈ ಹಿನ್ನೆಲೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಕಾಳಿಸಂಗಮ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ಚಿತ್ರನಟ- ನಿರ್ದೇಶಕ ಅರುಣ್ ಸಾಗರ್ ಸಹ ಪಾಲ್ಗೊಂಡಿದ್ದರು. ಸಾಕಷ್ಟು ಪ್ರವಾಸಿಗರು ಭೇಟಿ ನೀಡುವ ಹಾಗೂ ಕಾಳಿ ನದಿ ಸಮುದ್ರ ಸೇರುವ ಪವಿತ್ರ ಸ್ಥಳವಾದ ಕಾಳಿ ಸಂಗಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ರಾಶಿಯಾಗಿ ಗಬ್ಬೆದ್ದು ಹೋಗಿತ್ತು. ಈ ನಿಟ್ಟಿನಲ್ಲಿ ಇಂದು ವಾರದ ಸ್ವಚ್ಛತೆ ಹಮ್ಮಿಕೊಂಡ ಪಹರೆ ಕಾರ್ಯಕರ್ತರು ಕಡಲ ತೀರದಲ್ಲಿ ಸ್ವಚ್ಛತೆ ಮಾಡಿದರು.