ಗ್ಲೋಬಲ್ ಐಕಾನ್ ಪ್ರಿಯಾಂಕಾ ಛೋಪ್ರಾ 2021 ನೇ ಸಾಲಿನ ಆಸ್ಕರ್ ನಾಮಿನೇಷನ್ ಪಟ್ಟಿಯನ್ನು ಘೋಷಿಸಿದ್ದಾರೆ. ಪ್ರಿಯಾಂಕಾಗೆ ಪತಿ ನಿಕ್ ಜೋನ್ಸ್ ಸಾಥ್ ನೀಡಿದ್ದಾರೆ. ಉತ್ತಮ ಚಿತ್ರಕಥೆ ವಿಭಾಗಕ್ಕೆ ಪ್ರಿಯಾಂಕ ಅಭಿನಯದ 'ದಿ ವೈಟ್ ಟೈಗರ್' ಕೂಡಾ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಪತಿ ನಿಕ್ ಜೋನ್ಸ್ ಜೊತೆ ಪ್ರಿಯಾಂಕಾ ಛೋಪ್ರಾ ಟ್ವಿಟ್ಟರ್ನಲ್ಲಿ 'ದಿ ವೈಟ್ ಟೈಗರ್' ನಾಮಿನೇಷನ್ ಪ್ಲೇಟ್ ಫೋಟೋ ಹಂಚಿಕೊಂಡಿರುವ ಪ್ರಿಯಾಂಕಾ, "ನಮ್ಮ ಸಿನಿಮಾ ಆಸ್ಕರ್ಗೆ ನಾಮಿನೇಟ್ ಆಗಿದೆ. ರಾಮಿನ್ ಬಹ್ರಾನಿ ಹಾಗೂ ತಂಡಕ್ಕೆ ಅಭಿನಂದನೆಗಳು. ಈ ನಾಮಿನೇಷನ್ ಪಟ್ಟಿಯನ್ನು ನಾನು ಘೋಷಿಸುತ್ತಿರುವುದು ಮತ್ತೊಂದು ವಿಶೇಷ, ನನಗೆ ಬಹಳ ಹೆಮ್ಮೆಯಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕ ಜೊತೆಗಿನ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿಕ್ ಜೋನ್ಸ್, "ಈ ಚೆಲುವೆಯೊಂದಿಗೆ ಸೇರಿ, ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ನಾಮಿನೇಷನ್ ಪಟ್ಟಿಯನ್ನು ಘೋಷಿಸುವ ಅವಕಾಶ ಒದಗಿ ಬಂತು. ಪ್ರಿಯಾಂಕಾ ನಿರ್ಮಿಸಿ ಅಭಿನಯಿಸಿರುವ 'ದಿ ವೈಟ್ ಟೈಗರ್' ಕೂಡಾ ನಾಮಿನೇಷನ್ ಪಟ್ಟಿಯಲ್ಲಿದೆ. ಏಪ್ರಿಲ್ 25 ರಂದು ನಡೆಯುವ ಸಮಾರಂಭವನ್ನು ನಾನು ವೀಕ್ಷಿಸುತ್ತೇನೆ. ನಾಮಿನೇಟ್ ಆದ ಎಲ್ಲರಿಗೂ ಅಭಿನಂದನೆಗಳು" ಎಂದು ಬರೆದುಕೊಂಡಿದ್ದು ಆ ಪೋಸ್ಟನ್ನು ಪ್ರಿಯಾಂಕಾ ಜೊತೆ ಹಂಚಿಕೊಂಡಿದ್ದಾರೆ. ಪತಿ ಮಾಡಿರುವ ಪೋಸ್ಟ್ಗೆ ಪ್ರಿಯಾಂಕಾ ಲವ್ ಚಿಹ್ನೆಯೊಂದಿಗೆ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ಬರ್ತ್‌ಡೇ ದಿನ ಸುದೀಪ್ ತನ್ನ ಪತ್ನಿಯನ್ನು ಮೆಚ್ಚಿಸಿದ್ದು ಹೇಗೆ ಗೊತ್ತೇ? ರಮೇಶ್ ಅರವಿಂದ್ ಹೇಳಿದ ಸಂಗತಿ..
ಮುಕುಲ್ ಡಿಯೋರಾ ಜೊತೆ ಸೇರಿ ಪ್ರಿಯಾಂಕಾ ಛೋಪ್ರಾ 'ದಿ ವೈಟ್ ಟೈಗರ್' ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾದಲ್ಲಿನ ನಟನೆಗಾಗಿ ಪ್ರಿಯಾಂಕಾ ಇತ್ತೀಚೆಗೆ ಬಿಎಎಫ್ಟಿಎ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಈ ವಿಚಾರವನ್ನು ಪ್ರಿಯಾಂಕ ಸೋದರಸಂಬಂಧಿ ಪರಿಣಿತಿ ಛೋಪ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೊಂದು ಅಮೆರಿಕನ್ ಇಂಡಿಯನ್ ಸಿನಿಮಾವಾಗಿದ್ದು ಚಿತ್ರದ ಕಥೆಯನ್ನು ಅರವಿಂದ್ ಅಡಿಗ ಬರೆದಿರುವ ಬೂಕರ್ ಪ್ರಶಸ್ತಿ ವಿಜೇತ ಪುಸ್ತಕ 'ದಿ ವೈಟ್ ಟೈಗರ್' ನಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ವರ್ಣ ವಿಭಜನೆ ಹಾಗೂ ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಜನವರಿ 22 ರಂದು ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು. ಪ್ರಿಯಾಂಕಾ ಜೊತೆ ರಾಜ್ಕುಮಾರ್ ರಾವ್, ಆದರ್ಶ್ ಗೌರವ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.