ಡಾ.ವಿಷ್ಣುವರ್ಧನ ಹಾಗೂ ಡಾ.ಭಾರತಿ ಅವರ ಅಳಿಯ, ನಟ ಅನಿರುದ್ಧ ಜತಕರ್ ಅವರ ಕೀರ್ತಿ ಪ್ರಶಸ್ತಿಗಳಿಂದ ಹೆಚ್ಚಾಗುತ್ತಲಿದೆ. ಇವರ ರಚನೆ ಹಾಗೂ ನಿರ್ದೇಶನದ ಕಿರು ಚಿತ್ರಗಳು ವಿಶ್ವ ದಾಖಲೆ ಬರೆದು, ಐದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.
ಈಗ ಮತ್ತೊಂದು ಹಿರಿಮೆಯ ಗರಿ ಅನಿರುಧ್ ಸಾಧನೆಯ ಕಿರೀಟಕ್ಕೆ ಸೇರಿದೆ. ಒಂದೇ ದಿನ ಅತಿ ಹೆಚ್ಚು ಕಿರು ಚಿತ್ರಗಳ ಪ್ರದರ್ಶನ ಮಾಡಿದ್ದಕ್ಕೆ 'ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಪ್ರಶಸ್ತಿ ಪತ್ರ ನೀಡಿ ಅನಿರುಧ್ ಅವರನ್ನು ಗೌರವಿಸಿದೆ.
ಇನ್ನು ಸೆಪ್ಟೆಂಬರ್ 18, 2018 (ಡಾ ವಿಷ್ಣುವರ್ಧನ ಅವರ ಜನುಮ ದಿನ) ರಂದು ಈ ಕಿರುಚಿತ್ರಗಳು ಪ್ರದರ್ಶನಗೊಂಡಿದ್ದವು. ಕ್ಯಾಂಡಲ್ ಲೈಟ್, ಉಳಿಸಿ, ನೀರು, ಶಾಂತಂ ಪಾಪಂ, ಧೂಮ, ವೈಷ್ಣವ ಜನತೋ ಹೆಸರಿನಲ್ಲಿ ತಯಾರಾದ ಕಿರು ಚಿತ್ರಗಳು. ಈ ಎಲ್ಲ ಚಿತ್ರಗಳು ಸಾಮಾಜಿಕ ಕಳಕಳಿಯಿಂದ ಕೂಡಿದ ಕಾರಣವಾಗಿ ಸರ್ಟಿಫಿಕೇಟ್ ನೀಡಿ ಅನಿರುಧ್ ಅವರನ್ನು ಗೌರವಿಸಲಾಗಿದೆ.
ಇನ್ನು ಈ ಬಗ್ಗೆ ಮಾತಾಡುವ ಅನಿರುಧ್, ಈ ಎಲ್ಲಾ ದಾಖಲೆಗಳು ಆಗಿರೋದಕ್ಕೆ ಕಾರಣ ಆ ಭಗವಂತನ ಅನುಗ್ರಹ. ಅಪ್ಪಾಜಿ ಡಾ.ವಿಷ್ಣುವರ್ಧನರವರ ಆಶೀರ್ವಾದ, ನನ್ನ ಕುಟುಂಬದವರ ಶ್ರೀರಕ್ಷೆ, ಪ್ರೋತ್ಸಾಹ, ಕೀರ್ತಿ ಇನೋವೇಶನ್ಸ್ ತಂಡದ ಬೆಂಬಲದಿಂದ ಸಾಧ್ಯ. ಈ ದಾಖಲೆಯನ್ನು ನನ್ನ ಎಲ್ಲಾ ಕನ್ನಡಿಗರಿಗೂ ಮತ್ತು ನನ್ನ ಎಲ್ಲಾ ಭಾರತೀಯರಿಗೂ ಗೌರವಪೂರ್ವಕವಾಗಿ ಅರ್ಪಿಸುತ್ತೇನೆ ಎಂದು ಅನಿರುಧ್ ಅವರು ಹೇಳಿಕೊಳ್ಳುತ್ತಾರೆ.