ಉತ್ತಮ ಭಾವನಾತ್ಮಕ ಚಿತ್ರ ಹಾಗೂ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಅಚ್ಚುಕಟ್ಟಾಗಿ ಸಾರುವ ಕನ್ನಡ ಸಿನಿಮಾ ‘ರಾಮ ರಾಮ ರೇ’ ನಿರ್ದೇಶಿಸಿದ ಸತ್ಯ ಪ್ರಕಾಶ್ ಅವರ ಎರಡನೇ ಸಿನಿಮಾ ‘ಒಂದಲ್ಲಾ ಎರಡಲ್ಲಾ’ ಸಿನಿಮಾಕ್ಕೆ ತಡವಾಗಿಯಾದರೂ ಮೆಚ್ಚುಗೆ ದೊರೆಯುತ್ತಿದೆ.
ಮೆಲ್ಬೋರ್ನ್ ಚಿತ್ರೋತ್ಸವಕ್ಕೆ ಆಯ್ಕೆಯಾದ 'ಒಂದಲ್ಲಾ ಎರಡಲ್ಲಾ'
ಕಳೆದ ವರ್ಷ ಆಗಸ್ಟ್ನಲ್ಲಿ ಬಿಡುಗಡೆಯಾದ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಥಿಯೇಟರ್ನಲ್ಲಿ ಹೆಚ್ಚು ದಿನ ಇರದಿದ್ದರೂ ತಡವಾಗಿ ಮೆಚ್ಚುಗೆ ಗಳಿಸಿದೆ. ಅಲ್ಲದೆ ಮೆಲ್ಬೊರ್ನ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.
‘ಒಂದಲ್ಲಾ ಎರಡಲ್ಲಾ’ ಸಿನಿಮಾಗೆ ಮಾಧ್ಯಮಗಳಲ್ಲಿ ಒಳ್ಳೆಯ ಪ್ರಶಂಸೆ ದೊರೆತರೂ ಚಿತ್ರಮಂದಿರದಲ್ಲಿ ಮಾತ್ರ ಹೆಚ್ಚು ದಿನಗಳು ಉಳಿಸಿಕೊಳ್ಳಲು ಸಾಧ್ಯವಾಗದೆ ಇದ್ದದ್ದಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಬೇಸರ ಇದೆ. ಆದರೆ ಈಗ ದೊರೆಯುತ್ತಿರುವ ಮೆಚ್ಚುಗೆಯಿಂದ ಕೊಂಚ ಸಮಾಧಾನ ಆಗಿದೆ. ಆಗಸ್ಟ್ 8 ರಿಂದ 15 ವರೆಗೆ ಮೆಲ್ಬೋರ್ನ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಭಾರತೀಯ ಸಿನಿಮಾಗಳ ಪ್ರದರ್ಶನ ವಿಭಾಗದಲ್ಲಿ ಈ ಸಿನಿಮಾ ಕೂಡಾ ಪ್ರದರ್ಶವಾಗಲಿದೆ.
ಮಾಸ್ಟರ್ ರೋಹಿತ್ ಪಾಂಡವಪುರ ಮತ್ತು ಹಸುವೊಂದರ ಸುತ್ತ ಸುತ್ತುವ ಕಥೆ ಇದು. ಪುಟ್ಟ ಬಾಲಕ ಸಮೀರ ಕಳೆದು ಹೋದ ಹಸುವನ್ನು ಹುಡುಕಿಕೊಂಡು ಹೋಗುವ ಅಂಶವನ್ನು ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕ ಡಿ. ಸತ್ಯಪ್ರಕಾಶ್ ಅಳವಡಿಸಿದ್ದರು. ಉಮಾಪತಿ ಈ ಹಿಂದೆ ‘ಹೆಬ್ಬುಲಿ’ ಸಿನಿಮಾ ನಿರ್ಮಿಸಿದ್ದರು. ಸದ್ಯಕ್ಕೆ ಅವರ ನಿರ್ಮಾಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಶೂಟಿಂಗ್ ನಡೆಯುತ್ತಿದೆ. ನಂತರ ಶ್ರೀಮುರಳಿ ಅಭಿನಯದಲ್ಲಿ ‘ಮದಗಜ’ ಆರಂಭವಾಗಲಿದೆ.