ಹೊಸ ನೀರು ಬಂದ ಮೇಲೆ ಹಳೆ ನೀರು ಹರಿಯಬೇಕು. ಈ ಗಾದೆ ಮಾತು ಭಾರತೀಯ ಚಿತ್ರರಂಗದ ಎಲ್ಲಾ ತಾರೆಯರಿಗೆ ಅನ್ವಯ ಆಗುತ್ತೆ. ಒಂದು ಕಾಲದಲ್ಲಿ ಸ್ಟಾರ್ ಹೀರೋ, ಸ್ಟಾರ್ ಹೀರೋಯಿನ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ರಾರಾಜಿಸಿದವರು, ಹೊಸ ನಟ ನಟಿಯರು ಬಂದ ಮೇಲೆ ಬೇಡಿಕೆ ಕಳೆದುಕೊಳ್ಳುತ್ತಾರೆ. ಈಗ ಈ ಮಾತು ಕನ್ನಡ ಚಿತ್ರರಂಗದ ಕೆಲ ನಟರಿಗೆ ಅನ್ವಯ ಆಗುತ್ತೆ.
ಕನ್ನಡ ಚಿತ್ರರಂಗದಲ್ಲಿ ತನ್ನ ಡ್ಯಾನ್ಸ್ ಮೂಲಕವೇ ಕನ್ನಡಿಗರ ಮನಗೆದ್ದಿದ್ದ ನಟ ವಿನೋದ್ ರಾಜ್. ಪ್ರಸಿದ್ಧ ನಟಿ ಲೀಲಾವತಿಯವರ ಮಗನಾಗಿದ್ದ. ವಿನೋದ್ ರಾಜ್ 1987ರಲ್ಲಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ದಿನಗಳಲ್ಲಿ ಕಾಲೇಜ್ ಹೀರೋ, ಸ್ಟಾರ್ ಹೀರೋ ಆಗಿ ಮೆರೆದಿದ್ದು ಈಗ ಇತಿಹಾಸ.
ಎರಡು ಚಿತ್ರಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ವಿನೋದ್ ರಾಜ್, ಕೃಷ್ಣಾ ನೀ ಕುಣಿದಾಗ, ನಂಜುಂಡ, ಮಹಾಭಾರತ, ಶ್ರೀ ವೆಂಕಟೇಶ್ವರ ಮಹಿಮೆ, ನನಗೂ ಹೆಂಡ್ತಿ ಬೇಕು, ಯುದ್ಧಪರ್ವ, ಗಿಳಿ ಬೇಟೆ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ, ರಂಭಾ ರಾಜ್ಯದಲ್ಲಿ ರೌಡಿ, ರಾಜಣ್ಣ, ದಳವಾಯಿ, ಸ್ನೇಹಲೋಕ, ಓಂ ಶಕ್ತಿ, ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ, ನಮ್ಮ ಸಂಸಾರ ಆನಂದ ಸಾಗರ, ಪಾಂಡವ, ಕನ್ನಡದ ಕಂದ, ಶುಕ್ರ, ಯಾರದು ಹೀಗೆ 26 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಆದರೆ ವಿನೋದ್ ರಾಜ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಒಂದು ದಶಕವೇ ಆಗಿದೆ. ಕಂಪ್ಲೀಟ್ ಚಿತ್ರರಂಗದಿಂದ ವಿನೋದ್ ರಾಜ್ ದೂರ ಉಳಿದಿದ್ದು ಅಭಿಮಾನಿಗಳಿಗೆ ನೋವು ಇದೆ.
ಇನ್ನು ಹ್ಯಾಂಡ್ ಸಮ್ ಲುಕ್ ನಿಂದಲೇ ಕನ್ನಡ ಚಿತ್ರರಂಗದಲ್ಲಿ, ಸ್ಟಾರ್ ಪಟ್ಟಗಿಟ್ಟಿಸಿದ ನಟ ರಾಮ್ ಕುಮಾರ್. ಕನ್ನಡದ ಪ್ರಖ್ಯಾತ ನಿರ್ಮಾಪಕ ಶೃಂಗಾರ ನಾಗರಾಜ್ ಮುದ್ದಿನ ಮಗನಾಗಿದ್ದ, ರಾಮ್ ಕುಮಾರ್ 1990 ರಲ್ಲಿ ತೆರೆಕಂಡ ‘ಆವೇಶ ’ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ಈ ಚಿತ್ರ ರಾಮ್ ಕುಮಾರ್ನ್ನ ಗುರುತಿಸಲಿಲ್ಲ.
1993 ರಲ್ಲಿ ಬಂದ ಗೆಜ್ಜೆನಾದ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಾಗಿ ರಾಮ್ ಕುಮಾರ್ ಕನ್ನಡಿಗರ ಹೃದಯ ಕದಿಯುವಲ್ಲಿ ಯಶಸ್ವಿಯಾದ್ರು. ಅಲ್ಲಿಂದ ಪೂಜಾ, ತವರಿನ ತೊಟ್ಟಿಲು, ಹಬ್ಬ, ಸ್ನೇಹ ಲೋಕ, ಪಾಂಡವರು ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದರು.
ವರನಟ ಡಾ. ರಾಜಕುಮಾರ್ ರವರ ಪುತ್ರಿ ಪೂರ್ಣಿಮಾ ಅವ್ರನ್ನ ಮದುವೆಯಾದ ರಾಮ್ ಕುಮಾರ್, 2006 ರಲ್ಲಿ ಪಾಂಡವರು ಎಂಬ ಚಿತ್ರವನ್ನು ನಿರ್ಮಿಸಿ ನಟಿಸಿದರು. ಆದರೆ ಈ ಸಿನಿಮಾ ನಂತರ ರಾಮ್ ಕುಮಾರ್ ಚಿತ್ರರಂಗದಿಂದ ದೂರ ಸರಿದು 14 ವರ್ಷಗಳು ಉರುಳಿವೆ.