ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಫೆಬ್ರವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದು ಚಿತ್ರತಂಡ ಸಿನಿಮಾದ ಪೈರಸಿ ಹಾಗೂ ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಅಸಮಾಧಾನ ಹೊರಹಾಕಿದೆ.
ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂದು ಅಸಮಾಧಾನ ಹೊರ ಹಾಕಿದ ನಿರ್ದೇಶಕ ಪ್ರೇಮ್ ಪೈರಸಿ ಎಂಬ ಭೂತ ರಾಜ್ ಕುಮಾರ್ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಕಾಡುತ್ತಿದೆ. ಅದೀಗ ಏಕ್ ಲವ್ ಯಾ ಸಿನಿಮಾ ಚಿತ್ರತಂಡಕ್ಕೂ ತಟ್ಟಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಬೇಸರ ವ್ಯಕ್ತಪಡಿಸಿದರು.
ನಮ್ಮ ಸಿನಿಮಾ ಬಿಡುಗಡೆಯಾದ ದಿನವೇ ಪೈರಸಿ ಆಗಿದೆ. ಈ ಸಮಸ್ಯೆಯನ್ನು ಫಿಲ್ಮ್ ಚೇಂಬರ್ ಆಗಲಿ, ರಾಜ್ಯ ಸರ್ಕಾರವಾಗಲಿ ಬಗೆಹರಿಸುವುದಕ್ಕೆ ಆಗ್ತಾ ಇಲ್ಲ. ಮತ್ತೊಂದೆಡೆ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇದೆ ಅನ್ನೋದು ಸುಳ್ಳು ಎನ್ನುವ ಮೂಲಕ ಚಂದನವದಲ್ಲಿ ಮನಸ್ತಾಪ ಇದೆ ಎಂದು ಪರೋಕ್ಷವಾಗಿ ಹೇಳಿದರು.
ಪೈರಸಿ ವಿಚಾರವಾಗಿ ಯಾರು ಒಗ್ಗಟ್ಟನ್ನು ಪ್ರದರ್ಶನ ಮಾಡೋಲ್ಲ. ಅವರಿಗೆ ಅವರದೇ ಆದ ಕೆಲಸಗಳಿರುತ್ತವೆ. ಅಭಿಮಾನಿಗಳು ಸ್ಟಾರ್ ನಟರ ಹೆಸರುಗಳಲ್ಲಿ, ನಟರ ಮಧ್ಯೆ ಮನಸ್ತಾಪಗಳು ಬರುವ ಹಾಗೆ ಮಾಡ್ತಾ ಇದ್ದಾರೆ. ದಯವಿಟ್ಟು ಮೊದಲು ಇದನ್ನು ನಿಲ್ಲಿಸಬೇಕು ಎಂದು ಪ್ರೇಮ್ ಮನವಿ ಮಾಡಿದರು.
ಬಳಿಕ ನಟಿ ಹಾಗೂ ನಿರ್ಮಾಪಕಿ ರಕ್ಷಿತಾ ಮಾತನಾಡಿ, ಈ ಪೈರಸಿ ಅನ್ನೋದು ದೊಡ್ಡ ಮಟ್ಟದ ಮಾಫಿಯಾ. ಇದನ್ನು ಹೇಗೆ ತಡೆಯೋದು ಅನ್ನೋದು ತಲೆನೋವಾಗಿದೆ. ಪೈರಸಿ ಮಾಡುವವರು ನೇರವಾಗಿ ನಟರಿಗೆ ಮೆಸೇಜ್ ಹಾಕುವಷ್ಟು ಬೆಳೆದಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಯುವ ನಟ ರಾಣ, ನಟಿ ರೀಷ್ಮಾ ನಾಣಯ್ಯ, ಹಿರಿಯ ನಟ ಸುಚೇಂದ್ರ ಪ್ರಸಾದ್, ಛಾಯಾಗ್ರಾಹಕ ಮಹೇಂದ್ರ ಸಿಂಹ ಉಪಸ್ಥಿತರಿದ್ದರು.
ಇದನ್ನೂ ಓದಿ: ಜೈಪುರದಲ್ಲಿ ಜಂಗಲ್ ಸಫಾರಿ ಆನಂದಿಸಿದ ಮುನ್ನಾಭಾಯ್, ನಟಿ ರವೀನಾ ಟಂಡನ್